Site icon Vistara News

Women at Sea | ʼಅಗ್ನಿಪಥʼದಲ್ಲೂ ʼನಾರಿಶಕ್ತಿʼ, ನೌಕಾಪಡೆ ತರಬೇತಿಗೆ 600 ಯುವತಿಯರು ಸಜ್ಜು

Army

ನವದೆಹಲಿ: ಭಾರತೀಯ ಸೇನೆಯಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು, ನಾರಿಶಕ್ತಿಯ ಪ್ರದರ್ಶನವಾಗುತ್ತಿದೆ. ಇತ್ತೇಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆ ಸೇರಲೂ ಹೆಣ್ಣುಮಕ್ಕಳು ಅತ್ಯುತ್ಸಾಹ ತೋರಿದ್ದಾರೆ. ಒಡಿಶಾದಲ್ಲಿರುವ ಭಾರತೀಯ ನೌಕಾ ದಳದ ಪ್ರಾಥಮಿಕ ತರಬೇತಿ ಕೇಂದ್ರ ಐಎನ್‌ಎಸ್‌ ಚಿಲ್ಕಾ ನೂತನ ಯೋಧರ ಸ್ವಾಗತಕ್ಕಾಗಿ ಸಡಗರದಿಂದ ಸಿದ್ಧಗೊಳ್ಳುತ್ತಿದೆ. ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳಲಿರುವ ೬೦೦ ಅಗ್ನಿವೀರ ಮಹಿಳೆಯರ (Women at Sea) ಪ್ರಥಮ ತಂಡದ ತರಬೇತಿಗಾಗಿ, ಸರೋವರದ ತಟದಲ್ಲಿರುವ ಸುಂದರ ಆವರಣ ಸನ್ನದ್ಧವಾಗುತ್ತಿದೆ.

ಏನಿರಲಿದೆ ವಿಶೇಷ ವ್ಯವಸ್ಥೆ?

“ಮಹಿಳಾ ಯೋಧರಿಗಾಗಿಗೇ ಸಜ್ಜುಗೊಳ್ಳುತ್ತಿರುವ ಈ ಆವರಣದಲ್ಲಿ ಒಂದಿಷ್ಟು ಸೌಲಭ್ಯಗಳನ್ನು ಹೊಸದಾಗಿ ಕಲ್ಪಿಸಲಾಗಿದೆ. ಸಾನಿಟರಿ ಪ್ಯಾಡ್‌ ಯಂತ್ರಗಳು, ಅವುಗಳ ವಿಲೇವಾರಿಗೆ ಸೂಕ್ತ ಕಸದಬುಟ್ಟಿಗಳು, ಮಹಿಳೆಯರಿಗಾಗಿ ಪ್ರತ್ಯೇಕ ಊಟದ ಆವರಣ, ಈ ಘಟಕಗಳಲ್ಲಿ ಮಹಿಳಾ ಸಿಬ್ಬಂದಿಯ ನೇಮಕದಂಥ ಕ್ರಮಗಳಿಂದ ಮೊದಲ್ಗೊಂಡು, ಅಗ್ನಿವೀರ ನಾರಿಯರ ವಸತಿಗಾಗಿ ಪ್ರತ್ಯೇಕ ಬ್ಲಾಕ್‌ಗಳನ್ನು ಸಿದ್ಧಗೊಳಿಸಲಾಗಿದೆ” ಎಂದು ಈ ತರಬೇತಿಯ ಮೇಲ್ವಿಚಾರಣೆ ವಹಿಸಿಕೊಂಡಿರುವ ದಕ್ಷಿಣ ನೌಕಾ ಕಮಾಂಡ್‌ನ ಮುಖ್ಯಸ್ಥರಾದ ವೈಸ್‌ ಅಡ್ಮಿರಲ್‌ ಎಂ.ಎ. ಹಂಪಿಹೊಳಿ ತಿಳಿಸಿದ್ದಾರೆ.

೧೦ ಲಕ್ಷ ಅರ್ಜಿಗಳ ಸಲ್ಲಿಕೆ

ಅಗ್ನಿಪಥ ಯೋಜನೆಯಡಿ ಸೇನೆಯ ಮೂರು ಪಡೆಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು ೧೦ ಲಕ್ಷ ಅಭ್ಯರ್ಥಿಗಳಲ್ಲಿ ೮೨ ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಈ ಪೈಕಿ ೩೦೦೦ ಮಂದಿ ನೌಕಾ ಪಡೆಗೆ ನಿಯೋಜನೆಗೊಳ್ಳಲಿದ್ದು, ಅವರಲ್ಲಿ ಶೇ.೨೦ರಷ್ಟು, ಅಂದರೆ ೬೦೦ ಮಂದಿ ಅಗ್ನಿವೀರರು ಮಹಿಳೆಯರು. ಉಳಿದಂತೆ, ೪೦,೦೦೦ ಮಂದಿ ಭೂಸೇನೆಗೆ ಮತ್ತು ೩೦೦೦ ಮಂದಿ ಅಗ್ನಿವೀರರು ವಾಯುಸೇನೆ ನೇಮಕಗೊಳ್ಳಲಿದ್ದಾರೆ. ಅಗ್ನಿಪಥ ಯೋಜನೆ ಅಡಿ ವಾರ್ಷಿಕ ೪೬ ಸಾವಿರ ಸೈನಿಕರನ್ನು ನೇಮಿಸುವುದು ಸರಕಾರದ ಉದ್ದೇಶವಾಗಿದೆ.

ನೌಕಾ ಪಡೆಗೆ ಹೊಸದಾಗಿ ನೇಮಕಗೊಳ್ಳುತ್ತಿರುವ ವೀರರ ತರಬೇತಿಯ ಸಂಪೂರ್ಣ ಹೊಣೆ ಕೇರಳದ ಕೊಚ್ಚಿಯನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿದ ದಕ್ಷಿಣ ನೌಕಾ ಕಮಾಂಡ್‌ನದ್ದಾಗಿದೆ. ನೌಕಾ ಪಡೆಯಲ್ಲಿ ಕಳೆದ ೩೦ ವರ್ಷಗಳಿಂದಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದರೂ, ಸೈಲರ್‌(ನಾವಿಕ)ಗಳಾಗಿ ನೇಮಕಗೊಳ್ಳುತ್ತಿರುವುದು ಇದೇ ಮೊದಲು. ೧೩ ಮಹಿಳಾ ಅಧಿಕಾರಿಗಳು ಸೇರಿದಂತೆ, ತರಬೇತಿಯ ವಿವಿಧ ಹಂತಗಳಲ್ಲಿ ಸುಮಾರು ೫೦ ಸೇನಾಧಿಕಾರಿಗಳು ಮಾರ್ಗದರ್ಶನ ನೀಡಲಿದ್ದಾರೆ.

“ತರಬೇತಿಗೆಂದು ಬರಲಿರುವ ಅಭ್ಯರ್ಥಿಗಳ ಖಾಸಗಿತನವೂ ಸೇರಿದಂತೆ ಹಲವು ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆಗಳನ್ನು ಮಾಡಲಾಗಿದೆ. ಅವರ ಅಗತ್ಯಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಈಗಾಗಲೇ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ” ಎಂದು ವೈಸ್‌ ಅಡ್ಮಿರಲ್‌ ಹಂಪಿಹೊಳಿ ಹೇಳಿದ್ದಾರೆ. ಮಹಿಳೆಯರಿಗಾಗಿ ಮೊಬೈಲ್‌ ಶೌಚಾಲಯಗಳ ನಿರ್ಮಾಣ, ಈಜು ತರಬೇತಿಗೆ ಮತ್ತು ಸ್ವಚ್ಛತಾ ಕೆಲಸಕ್ಕೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಬರುವ ನವೆಂಬರ್‌ ೨೧ರಿಂದ ಅಗ್ನಿವೀರರ ತರಬೇತಿ ಆರಂಭವಾಗಲಿದೆ.

ತರಬೇತಿ ಪಠ್ಯದಲ್ಲಿ ವ್ಯತ್ಯಾಸವಿಲ್ಲ

“ಮಹಿಳೆಯರನ್ನು ಮಹಿಳಾ ಅಧಿಕಾರಿಗಳೇ ತರಬೇತುಗೊಳಿಸಲಿದ್ದಾರೆ. ಪುರುಷರು ಮತ್ತು ಮಹಿಳೆಯರ ತರಬೇತಿ ಪಠ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ದೈಹಿಕ ಸಾಮರ್ಥ್ಯ ಮಾನದಂಡಗಳನ್ನು, ವಿಶ್ವದೆಲ್ಲೆಡೆ ಜಾರಿಯಲ್ಲಿರುವ ಕ್ರಮದಂತೆ ಪ್ರತ್ಯೇಕಗೊಳಿಸಲಾಗಿದೆ. ತರಬೇತಿಯ ನಂತರ ನೌಕಾ ಪಡೆಯ ಎಲ್ಲ ೨೯ ಶಾಖೆಗಳಲ್ಲಿ ನೂತನ ಅಗ್ನಿವೀರರನ್ನು ನೇಮಕ ಮಾಡಲಾಗುವುದು. ಅವರನ್ನು ಯುದ್ಧನೌಕೆಗಳಿಗೂ ನಿಯೋಜಿಸಲಾಗುವುದು” ಎಂದು ವೈಸ್‌ ಅಡ್ಮಿರಲ್‌ ವಿವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ (ನಿವೃತ್ತ) ಕಮಾಂಡರ್‌ ಗೌರಿ ಮಿಶ್ರಾ, “ಸೂಕ್ಷ್ಮವಾದ ಬದಲಾವಣೆಗಳನ್ನು ಮಾಡಿ, ಇಡೀ ವ್ಯವಸ್ಥೆಯನ್ನು ಮಹಿಳಾ-ಸ್ನೇಹಿ ಮಾಡಿಕೊಂಡಿರುವ ನೌಕಾ ಪಡೆಯನ್ನು ಮೆಚ್ಚಲೇಬೇಕು” ಎಂದಿದ್ದಾರೆ.

ಇದನ್ನೂ ಓದಿ | Agneepath Recruitment 2022 | ಅಗ್ನಿಪಥ್‌ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ

Exit mobile version