ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿಪಕ್ಷಗಳು ರಾಜ್ಯಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದವು.
ಸದನದಲ್ಲಿ ಟಿಎಂಸಿ ಸದಸ್ಯರು ಇಂಧನ ದರ ಏರಿಕೆ ವಿಷಯವನ್ನು ಪ್ರಸ್ತಾಪಿಸಿದರು. ತೈಲ ದರ ಏರಿಕೆ ಖಂಡಿಸಿ ಸದನದ ಬಾವಿಗೆ ಇಳಿದು ಟಿಎಂಸಿ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್, ಎಡಪಕ್ಷಗಳು, ಸಮಾಜವಾದಿ ಪಕ್ಷ ಮತ್ತು ಶಿವಸೇನೆ ಸಂಸದರು ಕೂಡ ಎದ್ದು ನಿಂತು ಇಂಧನ ದರ ಏರಿಕೆಯನ್ನು ವಿರೋಧಿಸಿದರು. ಪ್ರತಿಪಕ್ಷ ನಾಯಕರು ತೀವ್ರ ಗದ್ದಲ ನಡೆಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಕೆಲ ಕಾಳ ಮುಂದೂಡಲಾಯಿತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಿಸಲಾಗಿದೆ. ಒಂದು ಕಡೆ, ಪೆಟ್ರೋಲಿಯಂ ಸಚಿವಾಲಯ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ನೆಪದಲ್ಲಿ ದರ ಹೆಚ್ಚಳವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಅತ್ಯಂತ ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರ ತ್ವರಿತ ಒಪ್ಪಂದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಕೇಂದ್ರ ಸರ್ಕಾರ LPG ದರವನ್ನು ಕೊನೆಯ ಬಾರಿಗೆ 2021ರ ಅಕ್ಟೋಬರ್ 6ರಂದು ಪರಿಷ್ಕರಿಸಿತ್ತು. ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್ 4ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದವು. 2021ರ ಜುಲೈ ಮತ್ತು ಅಕ್ಟೋಬರ್ 6ರ ನಡುವೆ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 100 ರೂಪಾಯಿಯಷ್ಟು ಏರಿಕೆಯಾಗಿತ್ತು.