ಬಿರ್‌ಭೂಮ್: 8 ಮಂದಿಯನ್ನು ಜೀವಂತವಾಗಿ ಸುಟ್ಟ ಬಿರ್‌ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮಕ್ಕೆ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ 10 ಕುಟುಂಬದ ಸದಸ್ಯರಿಗೆ ಖಾಯಂ ಸರ್ಕಾರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದರು. ಹಾನಿಗೀಡಾದ ಮನೆಗಳ ದುರಸ್ತಿಗಾಗಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಘರ್ಷಣೆಯಲ್ಲಿ ಗಾಯಗೊಂಡವರಿಗೆ ದೀದಿ 50 ಸಾವಿರ ಪರಿಹಾರ ಘೋಷಿಸಿದರು.
ಬಳಿಕ ಮಾತನಾಡಿದ ಅವರು ಹತ್ಯೆ ಮಾಡಿದವರನ್ನು ನಾವು ಬೇಟೆಯಾಡುತ್ತೇವೆ. ಅವರು ಶರಣಾಗದಿದ್ದಲ್ಲಿ ಬಂಧಿಸಲಾಗುವುದು ಮತ್ತು ಹತ್ಯಾಕಾಂಡಕ್ಕೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಳೆದ ಮಂಗಳವಾರ ಮುಂಜಾನೆ ಬಿರ್‌ಭೂಮ್ ಜಿಲ್ಲೆಯ ರಾಮಪುರ ಹತ್‌ನಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಜೀವಂತವಾಗಿ ಸುಟ್ಟು ಕರಕಲಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.