ನವದೆಹಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭೆ ಕ್ಷೇತ್ರಗಳಿಗೆ (Assembly Bypolls) ಗುರುವಾರ (ನವೆಂಬರ್ 3) ಉಪ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ತೆಲಂಗಾಣ, ಬಿಹಾರ, ಹರಿಯಾಣ, ಒಡಿಶಾ ಹಾಗೂ ಉತ್ತರ ಪ್ರದೇಶದಲ್ಲಿ ಹಲವು ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ತೆಲಂಗಾಣದ ಮುನುಗೋಡೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ. ಕಾಂಗ್ರೆಸ್ ಶಾಸಕರಾಗಿದ್ದ ಕೊಮಾಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ಕಳೆದ ಆಗಸ್ಟ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಕಾರಣ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರದಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಅದರಲ್ಲೂ, ಶಿವಸೇನೆಯು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಬಣಗಳಾಗಿ ಇಬ್ಭಾಗವಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಎರಡೂ ಬಣಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಇವುಗಳ ಜತೆಗೆ ಬಿಹಾರದ ಮೊಕಾಮ ಹಾಗೂ ಗೋಪಾಲ್‌ಗಂಜ್, ಹರಿಯಾಣದ ಅದಂಪುರ, ಉತ್ತರ ಪ್ರದೇಶದ ಗೋಲ ಗೋಕ್ರಣ್‌ನಾಥ್ ಮತ್ತು ಒಡಿಶಾದ ಧಾಮ್‌ನಗರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಆಯಾ ಕ್ಷೇತ್ರಗಳಲ್ಲಿ ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು ಹತ್ತಾರು ಕ್ರಮ ತೆಗೆದುಕೊಂಡಿದೆ.
ಇದನ್ನೂ ಓದಿ | Telangana battle | ತೆಲಂಗಾಣದ ಮುನುಗೋಡೆ ಉಪಚುನಾವಣೆಯಲ್ಲಿ ಟಿಆರ್‌ಎಸ್-ಬಿಜೆಪಿ ಹಣಾಹಣಿ