ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ (Rajiv Gandhi Assassination) ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ನಳಿನಿ, ಶ್ರೀಹರನ್, ಆರ್ ಪಿ ರವಿಚಂದ್ರನ್ ಮತ್ತು ಇತರ ನಾಲ್ವರು ಸುಪ್ರೀಂ ಕೋರ್ಟ್ ಶುಕ್ರವಾರ ಬಂಧಮುಕ್ತಗೊಳಿಸಿದೆ. ಜಸ್ಟೀಸ್ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು ಈ ಆದೇಶವನ್ನು ಮಾಡಿದೆ. ಕಳೆದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡು, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 7ನೇ ಆರೋಪಿಯಾಗಿದ್ದ ಪೆರಾರಿವಲನನ್ನು ಬಿಡುಗಡೆ ಮಾಡಿತ್ತು. ಅದೇ ಆದೇಶವು ಉಳಿದ ಅಪರಾಧಿಗಳು ಅನ್ವಯವಾಗುತ್ತದೆ ಎಂದು ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ. ತಮಿಳುನಾಡು ಸರ್ಕಾರ ಕೂಡ 2018ರಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಪಾಲರಿಗೆ ಮಾಡಿದ್ದ ಮನವಿಯನ್ನು ಪೀಠ ಉಲ್ಲೇಖಿಸಿದೆ.
ಯಾರ್ಯಾರು ಬಿಡುಗಡೆ?
ನಳಿನಿ ಜತೆಗೆ, ಶ್ರೀಹರನ್, ಸಂತಾನ್, ಮುರುಗನ್, ರಾಬರ್ಟ್, ಪಯಾಸ್ ಮತ್ತು ಆರ್ ವಿ ರವಿಚಂದ್ರನ್ ಅವರು ಬಿಡುಗಡೆಯಾಗುತ್ತಿರುವ ಅಪರಾಧಿಗಳು.
ತಮಿಳುನಾಡು ಸರ್ಕಾರಗಳ ಒತ್ತಡ
ರಾಜೀವ ಗಾಂಧಿ ಹತ್ಯೆಯ ಅಪರಾಧಿಗಳ ಬಿಡುಗಡೆಯು ತಮಿಳುನಾಡಿನಲ್ಲಿ ಭಾವನಾತ್ಮಕ ವಿಷಯವಾಗಿತ್ತು. ಎಐಎಡಿಎಂಕೆ ಅಥವಾ ಡಿಎಂಕೆ ಸರ್ಕಾರವಿರಲಿ, ಇನ್ನಾವುದೇ ಸರ್ಕಾರವಿರಲಿ ಈ ವಿಷಯಕ್ಕೆ ತುಂಬಾ ಮಹತ್ವ ನೀಡಿವೆ. ಈ ಅಪರಾಧಿಗಳ ಬಿಡುಗಡೆಗೆ ಒತ್ತಾಯಿಸುತ್ತಲೇ ಬಂದಿವೆ. ಈ ಏಳೂ ಅಪರಾಧಿಗಳು, ರಾಜೀವ್ ಗಾಂಧಿಯ ಹತ್ಯೆಯಲ್ಲಿ ತೀರಾ ಚಿಕ್ಕ ಪಾತ್ರವಹಿಸಿದ್ದಾರೆ. ಇನ್‌ಫ್ಯಾಕ್ಟ್ ರಾಜೀವ್ ಹತ್ಯೆಯ ಸಂಚು ಅವರಿಗೆ ಗೊತ್ತೇ ಇರಲಿಲ್ಲ. ಹಾಗಾಗಿ ಅವರನ್ನು ಬಿಡುಗಡೆ ಮಾಡಬೇಕೆಂಬುದು ತಮಿಳುನಾಡಿನ ಆಗ್ರಹವಾಗಿತ್ತು.
ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ 1991ರ ಮೇ 21ರಂದು ಎಲ್‌ಟಿಟಿಇ ಮಹಿಳಾ ಆತ್ಮಹತ್ಯಾ ಬಾಂಬರ್ ಮೂಲಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಕಾಂಗ್ರೆಸ್‌ನದ್ದು 85% ಸರಕಾರ: ರಾಜೀವ್ ಗಾಂಧಿಯನ್ನು ಉದಾಹರಿಸಿದ ಬೊಮ್ಮಾಯಿ