ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ (Kanchipuram Explosion) ಸಂಭವಿಸಿದ್ದು, ಯುಗಾದಿ ಹಬ್ಬದ ದಿನವೇ ಇಬ್ಬರು ಮಹಿಳೆಯರು ಸೇರಿ 7 ಜನ ಮೃತಪಟ್ಟಿದ್ದಾರೆ. 15 ಜನ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲೂ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಗೋದಾಮಿನಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.
ಕಾಂಚೀಪುರಂ ಜಿಲ್ಲೆ ವಝಥೊಟ್ಟಂ ಎಂಬ ಗ್ರಾಮದ ಬಳಿ ಇರುವ ಪಟಾಕಿ ತಯಾರಿಕಾ ಕಾರ್ಖಾನೆ ಘಟಕದ ಗೋದಾಮಿನಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸುಮಾರು 30 ಕಾರ್ಮಿಕರು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಗೋದಾಮಿನಲ್ಲಿದ್ದ ಬಹುತೇಕ ಪಟಾಕಿಗಳು ಏಕಕಾಲಕ್ಕೆ ಸಿಡಿದ ಕಾರಣ ಸ್ಫೋಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
“ಸ್ಫೋಟ ಸಂಭವಿಸುತ್ತಲೇ ಅಗ್ನಿಶಾಮಕ ದಳದ ಸಿಬ್ಬಂದಿ, ಕಾಂಚೀಪುರಂ ಜಿಲ್ಲಾ ಪೊಲೀಸರು ಹಾಗೂ ರಕ್ಷಣಾ ಸೇವೆಗಳ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ 15 ಜನರಲ್ಲಿ 13 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ” ಎಂದು ತಮಿಳುನಾಡು ಅಗ್ನಿ ಹಾಗೂ ರಕ್ಷಣಾ ಸೇವೆಗಳ ವಿಭಾಗದ ಡಿಜಿಪಿ ಅಭಾಷ್ ಕುಮಾರ್ ಮಾಹಿತಿ ನೀಡಿದರು.
ಸ್ಫೋಟ ಸಂಭವಿಸುತ್ತಲೇ ಜನರಿಗೆ ಭಾರಿ ಶಬ್ದ ಕೇಳಿದೆ. ಇದಾದ ಕೂಡಲೇ ನೂರಾರು ಜನ ಸ್ಥಳಕ್ಕೆ ಓಡಿ ಬಂದಿದ್ದಾರೆ. ಅವಘಡದ ತೀವ್ರತೆ ಅರಿತು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈಗಲೂ ಗೋದಾಮಿನಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Fire Accident: ಕೊಟ್ಟಿಗೆಯಲ್ಲಿ ಅಗ್ನಿ ಅವಘಡದಿಂದಾಗಿ ಹಸುಗಳೆರಡು ದಾರುಣ ಸಾವು; ರಕ್ಷಿಸಲು ಹೋದ ರೈತನಿಗೆ ಗಂಭೀರ ಗಾಯ
ಮಹಾರಾಷ್ಟ್ರದಲ್ಲೂ ಹೊಸ ವರ್ಷದ ಮೊದಲ ದಿನವೇ ಎರಡು ಕಾರ್ಖಾನೆಗಳಲ್ಲಿ ಸ್ಫೋಟ ಹಾಗೂ ಅಗ್ನಿ ಅವಘಡ ಸಂಭವಿಸಿದ್ದು, ಒಟ್ಟು ಐವರು ಮೃತಪಟ್ಟಿದ್ದರು. ನಾಸಿಕ್‌ನ ಮುಂಡೇಗಾಂವ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟು, 17 ಜನ ಗಾಯಗೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಸೋಲಾಪುರದ ಶಿರಳೆ ಗ್ರಾಮದಲ್ಲಿರುವ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ ಮೂವರು ಮೃತಪಟ್ಟಿದ್ದರು.