Site icon Vistara News

Road Accident: ಟ್ರಕ್-ಕ್ರೂಸರ್‌ ಡಿಕ್ಕಿ; ಮಕ್ಕಳು ಸೇರಿ ಏಳು ಜನ ಸ್ಥಳದಲ್ಲೇ ಸಾವು

Rajasthan Accident

7 Killed In Accident After Truck Collides With Vehicle In Rajasthan

ಜೈಪುರ: ರಾಜಸ್ಥಾನದ ದುಂಗಾರ್‌ಪುರ ಜಿಲ್ಲೆಯಲ್ಲಿ (Dungarpur District) ಭೀಕರ ಅಪಘಾತ ಸಂಭವಿಸಿದೆ. ಭಾನುವಾರ (ಅಕ್ಟೋಬರ್‌ 15) ರಾತ್ರಿ ಟ್ರಕ್‌ ಹಾಗೂ ಕ್ರೂಸರ್‌ ಡಿಕ್ಕಿಯಾಗಿದ್ದು, ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ರಸ್ತೆ ಅಪಘಾತದಲ್ಲಿ (Road Accident) 9 ಜನ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

“ದೆಹಲಿ-ಮುಂಬೈ ರಾಷ್ಟ್ರೀಯ ಹೆದ್ದಾರಿಯ ರತನ್‌ಪುರ ಬಳಿ ಅಪಘಾತ ಸಂಭವಿಸಿದೆ. ಏಳೂ ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಒಂಬತ್ತು ಜನರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಹು ಉಪಯೋಗಿ ವಾಹನವಾದ ಫೋರ್ಸ್‌ ಟ್ರ್ಯಾಕ್ಸ್‌ ಕ್ರೂಸರ್‌ಗೆ ಟ್ರಕ್‌ ಗುದ್ದಿದೆ. ಟ್ರಕ್‌ ಬ್ರೇಕ್‌ ಫೇಲ್‌ ಆದ ಕಾರಣ ಕ್ರೂಸರ್‌ಗೆ ಡಿಕ್ಕಿಯಾಗಿದೆ. ಕ್ರೂಸರ್‌ 13 ಸೀಟಿನ ವಾಹನವಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ಜನ ಕುಳಿತಿದ್ದರು. ವಾಹನದ ಮೇಲೂ ಒಂದಷ್ಟು ಜನ ಕುಳಿತಿದ್ದರು. 13 ಜನ ಪ್ರಯಾಣಿಸಬೇಕಾದ ವಾಹನದಲ್ಲಿ 21 ಜನ ಪ್ರಯಾಣಿಸುತ್ತಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನ ಜನ ಮೇಲೆ ಕುಳಿತವರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕ್ರೂಸರ್‌ ದುಂಗಾರ್‌ಪುರದಿಂದ ಅಹಮದಾಬಾದ್‌ ಕಡೆಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Road Accident: ಬೆಂಗಳೂರು- ಮೈಸೂರು ದಶಪಥದಲ್ಲಿ ಭೀಕರ ಅಪಘಾತ, ಇಬ್ಬರ ಸಾವು

ವಾಹನ ಚಾಲಕ, ಇಬ್ಬರು 14 ವರ್ಷದ ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಾಲ್ವರನ್ನು ಧನಪಾಲ್‌ (24), ಹೇಮಂತ್‌ (21), ರಾಕೇಶ್‌ (25) ಹಾಗೂ ಮುಕೇಶ್‌ (25) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀ ನಾರಾಯಣ ಮಂತ್ರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಂಡನ್‌ ಕನ್ವರಿಯಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡದಲ್ಲಿ ಬಸ್‌ ಕಂದಕಕ್ಕೆ ಉರುಳಿ ಏಳು ಜನ ಮೃತಪಟ್ಟಿದ್ದರು. ನೈನಿತಾಲ್‌ನ ಘಾಟ್‌ಗಡ್‌ ಬಳಿಯ ಕಲಧುಂಗಿ ರಸ್ತೆ ಮಾರ್ಗವಾಗಿ ಭಾನುವಾರ (ಅಕ್ಟೋಬರ್‌ 8) ರಾತ್ರಿ ಸಂಚರಿಸುತ್ತಿದ್ದ ಬಸ್‌ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದರು. ಇವರಲ್ಲಿ ಏಳು ಜನ ಮೃತಪಟ್ಟರೆ, ಇನ್ನೂ 25 ಜನರನ್ನು ರಕ್ಷಿಸಲಾಗಿತ್ತು.

Exit mobile version