ನವದೆಹಲಿ: ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಬೆಂಕಿಯಲ್ಲಿ ಕಾರಿನಲ್ಲಿದ್ದ ಏಳು ಮಂದಿನ ಸಜೀವ ದಹನಗೊಂಡಿದ್ದಾರೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ.
ಕಾರು ಪ್ರಯಾಣಿಕರೆಲ್ಲರೂ ಉತ್ತರ ಪ್ರದೇಶದ ಮೀರತ್ ನಿವಾಸಿಗಳಾಗಿದ್ದು, ಸಲಾಸರ್ ಬಾಲಾಜಿ ದೇವಸ್ಥಾನದಿಂದ ಹಿಸಾರ್ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಅರ್ಶಿವಾಡ್ ಪುಲಿಯಾ ಬಳಿ, ಕಾರು ಚಲಿಸುತ್ತಿದ್ದ ಟ್ರಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ತಕ್ಷಣವೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಫತೇಪುರ್ ವೃತ್ತ) ರಾಮ್ ಪ್ರತಾಪ್ ಬಿಷ್ಣೋಯ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರು ಚಾಲಕ ಕಾಗದದ ರೋಲ್ಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಓವರ್ಟೇಕ್ ಮಾಡಲು ಮುಂದಾಗಿ ಹಿಂದಿನಿಂದ ಗುದ್ದಿದ್ದ. ವಿರುದ್ಧ ದಿಕ್ಕಿನಿಂದ ಮತ್ತೊಂದು ವಾಹನ ಬರುತ್ತಿರುವುದನ್ನು ಚಾಲಕ ನೋಡಿದ್ದು, ಅಪಘಾತವನ್ನು ತಪ್ಪಿಸಲು ಹೋಗಿ ಟ್ರಕ್ ಗೆ ಡಿಕ್ಕಿ ಹೊಡೆಸಿದ್ದಾನೆ. ಈ ವೇಲೆ ಕಾರಿನಲ್ಲಿದ್ದ ಎಲ್ಪಿಜಿ ಕಿಟ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಅವಘಡಕ್ಕೆ ಒಳಗಾದ ತಕ್ಷಣ ಬೆಂಕಿ ಹೊತ್ತಿಕೊಂಡ ಕಾರಣ ಕಾರಿನ ಪ್ರಯಾಣಿಕರಿಗೆ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಹೊರಗಿನವರಿಗೆ ರಕ್ಷಿಸಲೂ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: Water Crisis : ನೀರಿಗಾಗಿ ಜಗಳ; ಪಕ್ಕದ ಮನೆಯ ಮಹಿಳೆಯನ್ನೇ ಇರಿದು ಕೊಂದ 15 ಬಾಲಕಿ
ಮೃತರನ್ನು ನೀಲಂ ಗೋಯಲ್ (55), ಅವರ ಮಗ ಅಶುತೋಷ್ ಗೋಯಲ್ (35), ಮಂಜು ಬಿಂದಾಲ್ (58), ಅವರ ಮಗ ಹಾರ್ದಿಕ್ ಬಿಂದಾಲ್ (37), ಅವರ ಪತ್ನಿ ಸ್ವಾತಿ ಬಿಂದಾಲ್ (32), ಅವರ ಪುತ್ರಿಯರಾದ ದೀಕ್ಷಾ (7) ಮತ್ತು ಸ್ವಾತಿ (4) ಎಂದು ಗುರುತಿಸಲಾಗಿದೆ. ಫತೇಪುರ್, ರಾಮ್ಗಢ್ ಮತ್ತು ಲಕ್ಷ್ಮಣಗಢದಿಂದ ಅಗ್ನಿಶಾಮಕ ದಳದ ವಾಹನಗಳನ್ನು ತಂದು ಬೆಂಕಿ ನಂದಿಸಲಾಗಿತ್ತು. ಬೆಂಕಿಯನ್ನು 30 ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜ್ಕಿಯಾ ಧನುಕಾ ಉಪ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಕಾರಿನಿಂದ ಶವಗಳನ್ನು ಹೊರತೆಗೆಯುವಾಗ, ಹಾನಿಗೊಳಗಾದ ಮೊಬೈಲ್ ಫೋನ್ ಪತ್ತೆಯಾಗಿತ್ತು. ಸ್ಥಳೀಯ ಗ್ರಾಮಸ್ಥರೊಬ್ಬರು ಸಿಮ್ ಕಾರ್ಡ್ ತೆಗೆದುಕೊಂಡು ಅದನ್ನು ತಮ್ಮ ಮೊಬೈಲ್ ಫೋನ್ ಗೆ ಹಾಕಿದ್ದಾರೆ. ಫೋನ್ ಸ್ವಿಚ್ ಆನ್ ಮಾಡಿದ ಕೂಡಲೇ ಮಹಿಳೆಯೊಬ್ಬಳು ಕರೆ ಮಾಡಿ ತನ್ನ ತಾಯಿ ಮತ್ತು ಸಹೋದರ ಕಾರಿನಲ್ಲಿ ಸಲಾಸರ್ ಬಾಲಾಜಿಗೆ ಹೋಗಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಅವರಿಗೆ ಮಾಹಿತಿ ನೀಡಲಾಗಿತ್ತು..