Site icon Vistara News

Rajya Sabha Election: ರಾಜ್ಯಸಭೆ ಸಾಕು, ಲೋಕಸಭೆಗೆ ಸ್ಪರ್ಧಿಸಿ! 7 ಕೇಂದ್ರ ಸಚಿವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

7 union minister denied ticket to Rajya Sabha Elections by BJP

ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾಗಿರುವ ಏಳು ಕೇಂದ್ರ ಸಚಿವರಿಗೆ ಮತ್ತೆ ರಾಜ್ಯಸಭೆ ಚುನಾವಣೆಗೆ (Rajya Sabha Election) ಸ್ಪರ್ಧಿಸಲು ಭಾರತೀಯ ಜನತಾ ಪಾರ್ಟಿಯು (BJP Party) ಅವಕಾಶವನ್ನು ನೀಡಿಲ್ಲ. ಈ ಸಚಿವರಿಗೆ ಲೋಕಸಭೆಗೆ ಸ್ಪರ್ಧಿಸುವಂತೆ (Lok Sabha Election) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(ಗುಜರಾತ್), ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(ಒಡಿಶಾ), ಐಟಿ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(ಕರ್ನಾಟಕ), ಪರಿಸರ ಸಚಿವ ಭೂಪೇಂದ್ರ ಯಾದವ್(ರಾಜಸ್ಥಾನ), ಮೀನುಗಾರಿಕೆ ಸಚಿವ ರೂಪಲಾ(ಗುಜರಾತ್), ಕೈಗಾರಿಕಾ ಸಚಿವ ನಾರಾಯಣ ರಾಣೆ ಮತ್ತು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್(ಮಹಾರಾಷ್ಟ್ರ) ಅವರಿಗೆ ರಾಜ್ಯಸಭೆಗೆ ಟಿಕೆಟ್ ‌ನಿರಾಕರಿಸಲಾಗಿದೆ.

ಈಗ ರಾಜ್ಯಸಭೆಗೆ ಟಿಕೆಟ್ ನಿರಾಕರಿಸಲಾಗಿರುವ ಎಲ್ಲ ಏಳು ಸಚಿವರಿಗೆ, ವಿವಿಧ ರಾಜ್ಯಗಳಲ್ಲಿ ಲೋಕಸಭೆಗೆ ಸ್ಪರ್ಧಿಸುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನ್ ಅವರನ್ನು ಅವರ ತವರು ರಾಜ್ಯವಾದ ಒಡಿಶಾದ ಸಂಬಲ್‌ಪುರ ಅಥವಾ ಧೆಕ್ನಾಲ್‌ನಿಂದ ಕಣಕ್ಕಿಳಿಸಬಹುದು. ಭೂಪೇಂದ್ರ ಯಾದವ್ ರಾಜಸ್ಥಾನದ ಅಲ್ವಾರ್ ಅಥವಾ ಮಹೇಂದ್ರಗಢದಿಂದ ಸ್ಪರ್ಧಿಸಬಹುದು ಮತ್ತು ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಒಂದರಲ್ಲಿ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಪೈಕಿ ಉತ್ತರ, ದಕ್ಷಿಣ ಮತ್ತು ಕೇಂದ್ರ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ.

ಮಾಂಡವಿಯಾ ಗುಜರಾತ್‌ನ ಭಾವನಗರ ಅಥವಾ ಸೂರತ್‌ನಿಂದ ಕಣಕ್ಕಿಳಿಯಬಹುದು. ರೂಪಾಲಾ ರಾಜ್‌ಕೋಟ್ ಆಯ್ದುಕೊಳ್ಳಬಹುದು. ಮುರಳೀಧರನ್ ಅವರು ತಮ್ಮ ತವರು ರಾಜ್ಯವಾದ ಕೇರಳದಿಂದ ಕಣಕ್ಕಿಳಿಯಬಹುದು. ಕೇರಳದಲ್ಲಿ ಬಿಜೆಪಿ ಯಾವುದೇ ಬಲವಿಲ್ಲ. ಆದರೂ, ತನ್ನ ಅದೃಷ್ಟವನ್ನು ಪರೀಕ್ಷಿಸುವುದಕ್ಕಾಗಿ ಬಿಜೆಪಿ ದೊಡ್ಡ ವ್ಯಕ್ತಿಗಳನ್ನು ಕಣಕ್ಕಿಳಿಸುತ್ತಿದೆ.

ಇಬ್ಬರು ಸಚಿವರಿಗೆ ಮಾತ್ರ ರಾಜ್ಯಸಭೆಗೆ ಸ್ಪರ್ಧೆ

ರಾಜ್ಯಸಭೆಯಿಂದ ನಿವೃತ್ತರಾದ ಒಟ್ಟು ಸಚಿವರ ಪೈಕಿ ಇಬ್ಬರಿಗೆ ಮಾತ್ರ ಮರಳಿ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(ಒಡಿಶಾ), ರಾಜ್ಯ ಸಚಿವ ಎಲ್ ಮುರುಗನ್(ಮಧ್ಯ ಪ್ರದೇಶ) ಅವರು ಮರಳಿ ರಾಜ್ಯಸಭೆಯನ್ನು ಪ್ರವೇಶಿಸಲಿದ್ದಾರೆ. ಇದಕ್ಕೆ ಮತ್ತೊಂದು ಅಪವಾದ ಎಂದರೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ. ಹಿಮಾಚಲ ಪ್ರದೇಶದಿಂದ ರಾಜ್ಯಸಭೆಗೆ ಪ್ರವೇಶಸಿದ್ದ ನಡ್ಡಾ ಅವರು ಈಗ ಗುಜರಾತ್‌ನಿಂದ ಮತ್ತೆ ರಾಜ್ಯಸಭೆಗೆ ಮರಳಲಿದ್ದಾರೆ. ಜತೆಗೆ, ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆ ಪ್ರವೇಶಿಸಲಿದ್ದಾರೆ.

ಒಟ್ಟು 28 ರಾಜ್ಯಸಭೆ ಸದಸ್ಯರು ನಿವೃತ್ತರಾಗಿದ್ದು, ಈ ಪೈಕಿ 24 ಸದಸ್ಯರಿಗೆ ರಾಜ್ಯಸಭೆಗೆ ಬದಲಾಗಿ ಲೋಕಸಭೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ. ರಾಜ್ಯಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಬಿಜೆಪಿಯ ತಂತ್ರವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಐದು ಅಸೆಂಬ್ಲಿ ಚುನಾವಣೆಗಳಿಗೆ ಪ್ರತಿಬಿಂಬಿಸುವಂತಿದೆ. ಪಕ್ಷವು “ಸಾಮೂಹಿಕ ನಾಯಕತ್ವ” ಮತ್ತು ರಾಜ್ಯ ಚುನಾವಣೆಗಳಿಗೆ ಲೋಕಸಭೆಯ ಸಂಸದರನ್ನು ಕಣಕ್ಕಿಳಿಸುವುದು ಸೇರಿದಂತೆ ಉನ್ನತ ಅಭ್ಯರ್ಥಿಗಳ ಆಯ್ಕೆಯ ಮೇಲೆ ಕೇಂದ್ರೀಕರಿಸುತ್ತಿದೆ. ಆ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಹೆಣೆದಿದೆ.

ಈ ಸುದ್ದಿಯನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆಗೆ ಮಿಲಿಂದ್ ದಿಯೋರಾರನ್ನು ಕಣಕ್ಕಿಳಿಸಿದ ಶಿಂಧೆ ಶಿವಸೇನೆ

Exit mobile version