ಕಠ್ಮಂಡು: ನೇಪಾಳ ಪೋಖರಾ ವಿಮಾನ ನಿಲ್ದಾಣದ ಬಳಿ ರನ್ ವೇದಲ್ಲಿ ಪತನಗೊಂಡ (Nepal plane crash) ಯೇತಿ ಏರ್ಲೈನ್ಸ್ಗೆ ಸೇರಿದ ವಿಮಾನದಲ್ಲಿದ್ದ 72 ಮಂದಿಯೂ ಮೃತಪಟ್ಟಿದ್ದು, ಅದರಲ್ಲಿ, ಸೋಮವಾರ ಸಂಜೆಯವರೆಗೆ 70 ಜನರ ಮೃತದೇಹ ಸಿಕ್ಕಿದೆ. ಇನ್ನೂ ಎರಡು ಶವಗಳಿಗಾಗಿ ಇಂದು ಬೆಳಗ್ಗೆಯಿಂದ ಹುಡುಕಾಟ ನಡೆದಿದೆ. ಹಾಗೇ, ಇವರಲ್ಲಿ ಐವರು ಭಾರತೀಯರು ಸೇರಿ, ಒಟ್ಟು 42 ಮಂದಿಯ ಗುರುತು ಪತ್ತೆಯಾಗಿದೆ.
ಜನವರಿ 15ರಂದು ಯೇತಿ ಏರ್ವೇಸ್ಗೆ ಸೇರಿದ ವಿಮಾನವೊಂದು ಕಠ್ಮಂಡುವಿನಿಂದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಲ್ಯಾಂಡ್ ಆಗಲು ಕೆಲವೇ ಕ್ಷಣದ ಮೊದಲು ಅಲ್ಲಿಯೇ ಇದ್ದ ಸೇತಿ ಗಂಡಕಿ ನದಿ ದಡದ ಮೇಲೆ ಪತನಗೊಂಡಿದೆ. ಕಡಿದಾದ ಕಂದಕಕ್ಕೆ ವಿಮಾನ ಬಿದ್ದು, ಬೆಂಕಿ ಹೊತ್ತಿ ಉರಿದಿದೆ. ವಿಮಾನದಲ್ಲಿ 68 ಪ್ರಯಾಣಿಕರು, 4 ಮಂದಿ ಸಿಬ್ಬಂದಿ ಸೇರಿ 72 ಮಂದಿ ಇದ್ದರು. ಅವರೆಲ್ಲರ ಜೀವ ಹೋಗಿದೆ. ಆ ವಿಮಾನದಲ್ಲಿ ಇದ್ದವರು ಯಾರೆಂಬುದು ಗೊತ್ತಿದ್ದರೂ, ಮೃತದೇಹಗಳು ಜಾಸ್ತಿ ನುಜ್ಜುಗುಜ್ಜಾದವರ ಗುರುತು ಪತ್ತೆ ಮಾಡುವುದು ಕಷ್ಟಕರವಾಗಿದೆ. ಇನ್ನು ಪೋಖರ ಆಸ್ಪತ್ರೆಯಲ್ಲಿ 24 ಮೃತದೇಹಗಳ ಪರೀಕ್ಷೆಯಾಗಲಿದ್ದು, ಉಳಿದವುಗಳನ್ನು ಬೇರೆ ಕೆಲವು ದೊಡ್ಡ ಆಸ್ಪತ್ರೆಗಳಿಗೆ ಸಾಗಿಸುವ ಸಿದ್ಧತೆ ನಡೆದಿದೆ.
ಜನವರಿ 15ರಂದು ವಿಮಾನ ಬೆಳಗ್ಗೆ 10.33ಕ್ಕೆ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇದರಲ್ಲಿ 53 ನೇಪಾಳಿ ನಾಗರಿಕರು, ಐವರು ಭಾರತೀಯರು (ಉತ್ತರ ಪ್ರದೇಶದವರು), ನಾಲ್ವರು ರಷ್ಯನ್ನರು ಮತ್ತು ಒಬ್ಬ ಐರಿಶ್, ಇಬ್ಬರು ಕೊರಿಯನ್ನರು ಮತ್ತು ಒಬ್ಬರು ಅರ್ಜೆಂಟೀನಾ ಪ್ರಜೆ ಮತ್ತು ಒಬ್ಬ ಫ್ರೆಂಚ್ ನಾಗರಿಕ ಇದ್ದರು. ಇನ್ನು ಉತ್ತರ ಪ್ರದೇಶದವರ ಮೃತದೇಹಗಳನ್ನು ತರುವ ಸಲುವಾಗಿ ಅವರ ಕುಟುಂಬದವರು ಕಠ್ಮಂಡುವಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Nepal plane crash | ವೈರಲ್ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!