Site icon Vistara News

Land For Job Case: ತೇಜಸ್ವಿ ಯಾದವ್‌, ಸಂಬಂಧಿಕರ ನಿವಾಸದಲ್ಲಿ 70 ಲಕ್ಷ ರೂ., 1.5 ಕೆ.ಜಿ ಚಿನ್ನ ಪತ್ತೆ

₹70 lakh cash, 1.5 kg gold jewellery found during raids on Tejashwi Yadav, sisters

ತೇಜಸ್ವಿ ಯಾದವ್

ನವದೆಹಲಿ: ಬಿಹಾರದಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ (Land For Job Case) ಸಂಬಂಧಿಸಿದಂತೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ದೆಹಲಿ ನಿವಾಸ, ತೇಜಸ್ವಿ ಯಾದವ್‌ ಸಹೋದರಿಯರ ನಿವಾಸಗಳು ಸೇರಿ ಹಲವೆಡೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದಾಳಿ ವೇಳೆ 70 ಲಕ್ಷ ರೂ. ನಗದು, ಒಂದೂವರೆ ಕೆ.ಜಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜಸ್ವಿ ಯಾದವ್‌, ಪುತ್ರಿಯರಾದ ರಾಗಿಣಿ, ಚಂದಾ, ಹೇಮಾ ಯಾದವ್‌, ರಾಗಿಣಿ ಪತಿ ಜಿತೇಂದ್ರ ಯಾದವ್ ಹಾಗೂ ಲಾಲು ಆಪ್ತ ಅಬು ದೊಜಾನ ಅವರಿಗೆ ಸೇರಿದ ನಿವಾಸ, ಕಚೇರಿ ಸೇರಿ 24 ಕಡೆ ಇ.ಡಿ ದಾಳಿ ನಡೆಸಿದೆ. ರಾಷ್ಟ್ರ ರಾಜಧಾನಿ ಪ್ರದೇಶ (NCR), ದೆಹಲಿ, ಪಟನಾ, ಮುಂಬೈ ಸೇರಿ ಹಲವು ನಗರಗಳಲ್ಲಿ ಇ.ಡಿ ದಾಳಿ ನಡೆಸಿದೆ. ದಾಳಿ ವೇಳೆ, ನಗದು, ಚಿನ್ನದ ಜತೆಗೆ 900 ಡಾಲರ್‌ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆಗೆ ತೇಜಸ್ವಿ ಯಾದವ್‌ ಗೈರು

ತೇಜಸ್ವಿ ಯಾದವ್‌ ಅವರ ಪತ್ನಿಯು ಅನಾರೋಗ್ಯಕ್ಕೀಡಾದ ಕಾರಣ ತೇಜಸ್ವಿ ಯಾದವ್‌ ಶನಿವಾರ ಇ.ಡಿ ವಿಚಾರಣೆಗೆ ಹಾಜರಾಗಿಲ್ಲ. ರಾಜಶ್ರೀ ಯಾದವ್‌ ಅವರು ಗರ್ಭಿಣಿಯಾಗಿದ್ದು, ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೆಹಲಿಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ, ತೇಜಸ್ವಿ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ.

ಲಾಲು ಪ್ರಸಾದ್‌ ಯಾದವ್‌ ಅವರು 2004-09ರ ಅವಧಿಯ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಸಂಬಂಧಿಕರು ಸೇರಿ ಹಲವರಿಂದ ಕಡಿಮೆ ಹಣಕ್ಕೆ ಜಮೀನು ಖರೀದಿಸಿದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಈಗಾಗಲೇ ಲಾಲು ಪ್ರಸಾದ್‌ ಯಾದವ್‌ ಅವರನ್ನೂ ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ: Land For Job Case : ದಿಲ್ಲಿಯ ತೇಜಸ್ವಿ ಯಾದವ್ ಮನೆ ಶೋಧ, ಸಿಬಿಐ ವಿರುದ್ಧ ಸಹೋದರಿ ವಾಗ್ದಾಳಿ

Exit mobile version