70 ವರ್ಷದ, ಅಶಕ್ತ ಅಜ್ಜಿಯೊಬ್ಬರು ತಮ್ಮ ವೃದ್ಧಾಪ್ಯ ವೇತನದ ಹಣ ಪಡೆಯುವ ಸಲುವಾಗಿ ಬರಿಗಾಲಿನಲ್ಲಿ ಹಲವು ಕಿಲೋಮೀಟರ್ಗಳಷ್ಟು ದೂರ, ಬಿರುಬಿಸಿಲಿನಲ್ಲೇ ನಡೆದುಕೊಂಡೇ ಹೋದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವೃದ್ಧೆಗೆ ಹೆಜ್ಜೆಯೂರಲು ಆಗುತ್ತಿಲ್ಲ. ಆದರೆ ವಾಕರ್ ಇಲ್ಲ. ಬದಲಿಗೆ ಒಂದು ಮುರಿದ ಕುರ್ಚಿಯನ್ನು ಮುಂದಕ್ಕೆ ಊರುತ್ತ, ಮಾರುದ್ದ ರಸ್ತೆಯಲ್ಲಿ ಒಂದೇ ಸಮನೆ ಹೆಜ್ಜೆ ಹಾಕುತ್ತ ಹೋಗುವುದನ್ನು ವಿಡಿಯೊದಲ್ಲಿ ನೋಡಬಹುದು.
ಈ ಘಟನೆ ವರದಿಯಾಗಿದ್ದು ಒಡಿಶಾದ ನಬರಂಗಪುರ ಜಿಲ್ಲೆಯ ಬಾನುಗುಡಾ ಎಂಬ ಹಳ್ಳಿಯಿಂದ. ಮಹಿಳೆ ಹೆಸರು ಸೂರ್ಯಾ ಹರಿಜನ್. ಇವರೀಗ ತಮ್ಮ ವೃದ್ಧಾಪ್ಯ ಪಿಂಚಣಿ ಪಡೆಯಲು ಅಕ್ಷರಶಃ ಹೋರಾಟವನ್ನೆ ನಡೆಸುತ್ತಿದ್ದಾರೆ. ಈಕೆಯ ಹಿರಿಯ ಮಗ ವಲಸೆ ಕಾರ್ಮಿಕನಾಗಿದ್ದು, ಮನೆಯಲ್ಲಿ ಇರುವುದಿಲ್ಲ. ವಿವಿಧ ರಾಜ್ಯಗಳಿಗೆ ಕೆಲಸದ ನಿಮಿತ್ತ ಹೋಗುತ್ತಿರುತ್ತಾರೆ. ಅವರು ತಮ್ಮ ಎರಡನೇ ಮಗನೊಂದಿಗೆ ವಾಸವಾಗಿದ್ದುಕೊಂಡಿದ್ದಾರೆ. ಅವನಿಗೂ ಏನೂ ಮಹಾನ್ ಆದಾಯವಿಲ್ಲ. ಸ್ಥಳೀಯ ಬೇರೆಬೇರೆ ಮನೆಗಳ ದನಗಳನ್ನು ಮೇಯಿಸಿ ಹಣಗಳಿಸುತ್ತಿದ್ದಾನೆ. ಉಳುಮೆ ಮಾಡೋಣವೆಂದರೆ ಒಂದು ಚಿಕ್ಕ ಭೂಮಿಯ ತುಂಡೂ ಅವರ ಬಳಿ ಇಲ್ಲ.
ಒಡಿಶಾದಲ್ಲಿ 60ವರ್ಷದಿಂದ 79ವರ್ಷದವರೆಗಿನ ವೃದ್ಧರಿಗೆ ತಿಂಗಳಿಗೆ 500 ರೂಪಾಯಿ ನೀಡಲಾಗುತ್ತದೆ ಮತ್ತು 80ವರ್ಷದ ನಂತರದವರಿಗೆ ತಿಂಗಳಿಗೆ 700 ರೂ.ಕೊಡುತ್ತಾರೆ. ಈ ವೃದ್ಧೆಗೆ 70ವರ್ಷವಾಗಿದ್ದರಿಂದ ತಿಂಗಳಿಗೆ 500 ರೂಪಾಯಿ ಬರುತ್ತಿತ್ತು. ಮೊದಲೆಲ್ಲ ಆಕೆ ಕೈಯಲ್ಲೇ ಹಣ ಪಡೆಯುತ್ತಿದ್ದರು. ಆದರೆ ಈಗ ಬ್ಯಾಂಕ್ ಅಕೌಂಟ್ಗೆ ಹಣ ಬರುತ್ತದೆ. ಆದರೆ ಅದನ್ನು ಪಡೆಯಲು ಸೂರ್ಯಾ ಹರಿಜನ್ ಪಡಿಪಾಟಲು ಪಡುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಬ್ಯಾಂಕ್ಗೆ ಅಲೆಯಬೇಕಾಗಿದೆ. ಸಹಿ ಹಾಕಲು ಬಾರದ ಸೂರ್ಯಾ ಹರಿಜನ್ ದಾಖಲೆ ಮೇಲೆ ಹೆಬ್ಬೆಟ್ಟು ಒತ್ತಬೇಕು. ಆದರೆ ಅವರ ಎಡಗೈ ಹೆಬ್ಬೆರಳಿನ ಗುರುತು ಕೆಲವೊಮ್ಮೆ ಹೊಂದಾಣಿಕೆಯೇ ಆಗದ ಕಾರಣ ಅವರಿಗೆ ಹಣ ಕೊಡಲು ಸಾಧ್ಯವೇ ಆಗುತ್ತಿಲ್ಲ ಎಂಬುದು ಬ್ಯಾಂಕ್ನವರ ಹೇಳಿಕೆ. ಆದರೆ ಹಣದ ಅಗತ್ಯ ತುಂಬ ಇರುವ ವೃದ್ಧೆ, ಇವತ್ತು ಆಗಬಹುದು, ನಾಳೆ ಆಗಬಹುದು ಎಂಬ ಆಸೆಯಿಂದ ಬ್ಯಾಂಕ್ಗೆ ಎಡತಾಕುತ್ತಲೇ ಇದ್ದಾರೆ.
ಇದನ್ನೂ ಓದಿ: Karnataka Election 2023: 102, 108 ವರ್ಷದ ವೃದ್ಧೆಯರಿಗೆ ಚುನಾವಣಾ ಅಧಿಕಾರಿಗಳಿಂದ ಸನ್ಮಾನ
ವಿಡಿಯೊ ವೈರಲ್ ಆದ ಬೆನ್ನಲ್ಲೇ ಸ್ಥಳೀಯ ಆಡಳಿತಗಳು, ಬ್ಯಾಂಕ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಹಿಂದೆ ತನ್ನ ಪಿಂಚಣಿ ಸಮಸ್ಯೆಯನ್ನು ವೃದ್ಧೆ ಸ್ಥಳೀಯ ಬ್ಲಾಕ್ ಮತ್ತು ಪಂಚಾಯಿತಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಆದರೆ ಅದು ವ್ಯರ್ಥವಾಗಿತ್ತು. ವಿಡಿಯೊ ವೈರಲ್ ಆಗಿ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಮ್ಯಾನೇಜರ್ ‘ವೃದ್ಧೆಯ ಎಡಗೈ ಹೆಬ್ಬೆರಳ ಮೇಲೆಲ್ಲ ಒಡಕು ಉಂಟಾಗಿದೆ. ಹೀಗಾಗಿ ಅವರ ಥಂಬ್ ಅಥಂಟಿಕೇಶನ್ ಸಮಸ್ಯೆ ಆಗುತ್ತಿದೆ. ನಾವು ಆದಷ್ಟು ಬೇಗ ಇದಕ್ಕೆ ಪರ್ಯಾಯ ಕಂಡುಕೊಂಡು, ಅವರಿಗೆ ಹಣ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ಹಾಗೇ, ಪಂಚಾಯಿತಿ ಅಧಿಕಾರಿಗಳೂ ಆಕೆಗೆ ಭರವಸೆ ಕೊಟ್ಟಿದ್ದು, ‘ಇನ್ಮುಂದೆ ವೃದ್ಧಾಪ್ಯ ಪಿಂಚಣಿಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎಂದಿದ್ದಾರೆ.