ಕಠ್ಮಂಡು: ನೇಪಾಳದ ಪೊಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಬಳಿ ಪತನವಾದ ವಿಮಾನ (Nepal Plane Crash)ದಲ್ಲಿ ಇದ್ದ 72 ಮಂದಿಯೂ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಒಟ್ಟು 40 ಶವಗಳು ಸಿಕ್ಕಿವೆ. ಈ ವಿಮಾನದಲ್ಲಿ ಐವರು ಭಾರತೀಯರು ಸೇರಿ ಒಟ್ಟು 10 ಪ್ರಯಾಣಿಕರು ವಿದೇಶಿಯರು ಇದ್ದರು. ಭಾರತೀಯರೂ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ. ಯೇತಿ ಏರ್ಲೈನ್ಸ್ಗೆ ಸೇರಿದ ಈ ವಿಮಾನ ಇಂದು ಕಠ್ಮಂಡುವಿನಿಂದ ಪೊಖರಾಕ್ಕೆ ಆಗಮಿಸುತ್ತಿತ್ತು. ಇದರಲ್ಲಿ ನಾಲ್ವರು ಸಿಬ್ಬಂದಿ ಮತ್ತು 68 ಪ್ರಯಾಣಿಕರು ಸೇರಿ ಒಟ್ಟು 72 ಮಂದಿ ಇದ್ದರು. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವುದಕ್ಕೂ ಮೊದಲು ಅಲ್ಲಿಯೇ ಸಮೀಪದಲ್ಲಿದ್ದ ಸೇತಿ ನದಿ ದಡದ ಮೇಲೆ ಪತನವಾಗಿದೆ. ಏರ್ಪೋರ್ಟ್ ಸದ್ಯ ಕ್ಲೋಸ್ ಆಗಿದೆ. ವಿಮಾನವಂತೂ ಸಂಪೂರ್ಣ ಸುಟ್ಟುಹೋಗಿದೆ.
ನೇಪಾಳದಲ್ಲಿ ಭೌಗೋಳಿಕ ರಚನೆಯೇ ಕಠಿಣಾತಿಕಠಿಣ. ಇಲ್ಲಿ ವಿಮಾನ ದುರಂತಗಳು ಹೊಸದಲ್ಲ. ಹೀಗೆ ವಿಮಾನಗಳು ಬಿದ್ದಾಗ ಅದೆಷ್ಟೋ ಸಲ ಬಿದ್ದ ಜಾಗ ಕಂಡುಹಿಡಿಯಲೇ ದಿನಗಟ್ಟಲೆ ಬೇಕಾಗುತ್ತದೆ. 2022ರ ಮೇ ತಿಂಗಳಲ್ಲಿ ಟಾರಾ ಏರ್ಲೈನ್ಸ್ಗೆ ಸೇರಿದ, 22 ಮಂದಿಯಿದ್ದ ವಿಮಾನವೊಂದು ದುರಂತಕ್ಕೀಡಾಗಿತ್ತು. ಅದರಲ್ಲೂ ನಾಲ್ವರು ಭಾರತೀಯರು, ಇಬ್ಬರು ಜರ್ಮನ್ ಪ್ರಜೆಗಳು ಇದ್ದರು. ಪೊಖರಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಜೊಮ್ಸೊಮ್ನತ್ತ ತೆರಳುತ್ತಿದ್ದ ವಿಮಾನ ಕೆಲವೇ ಹೊತ್ತಲ್ಲಿ, ಏರ್ ಟ್ರಾಫಿಕ್ ಕಂಟ್ರೋಲ್ಗೆ ಸಿಗದಂತಾಗಿ, ಪತನಗೊಂಡಿತ್ತು. ಎಲ್ಲ 22 ಮಂದಿಯೂ ಮೃತಪಟ್ಟಿದ್ದರು. 2018ರಲ್ಲಿ ಯುಎಸ್-ಬಾಂಗ್ಲಾ ವಿಮಾನವೊಂದು ಪತನಗೊಂಡು 51 ಮಂದಿ ಮೃತಪಟ್ಟಿದ್ದರು. ಹೀಗಾಗಿ ಹಲವು ವಿದೇಶಿ ವಾಯುಯಾನ ಸಂಸ್ಥೆಗಳು ನೇಪಾಳ ಮಾರ್ಗದಲ್ಲಿ ತಮ್ಮ ವಿಮಾನ ಸಂಚಾರವನ್ನೇ ನಿಷೇಧಿಸಿವೆ.
ಇದನ್ನೂ ಓದಿ: Nepal Plane Crash | ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನ; ಹಲವರು ಮೃತಪಟ್ಟಿರುವ ಶಂಕೆ