ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯತೆಯಲ್ಲಿ ಜಾಗತಿಕವಾಗಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ, ಬ್ರಿಟನ್ ಪ್ರಧಾನಿ ಸೇರಿ ವಿಶ್ವದ ನಾಯಕರ ಮಧ್ಯೆಯೂ ಮೋದಿ ಅಗ್ರ ಸ್ಥಾನದಲ್ಲಿದ್ದಾರೆ. ಮೋದಿ ಅವರು ಜಾಗತಿಕವಾಗಿ ಜನಪ್ರಿಯ ನಾಯಕ ಎನಿಸಿದರೆ, ಭಾರತದಲ್ಲಿ ಶೇ.72ರಷ್ಟು ಜನ ನರೇಂದ್ರ ಮೋದಿ ಅವರೇ ಅತ್ಯಂತ ಪ್ರಭಾವಶಾಲಿ ನಾಯಕ ಎಂಬುದಾಗಿ ನಂಬುತ್ತಾರೆ ಎಂದು ಸಮೀಕ್ಷಾ (Axis My India Survey) ವರದಿಯೊಂದು ತಿಳಿಸಿದೆ.
ದೇಶದ ಪ್ರಮುಖ ಕನ್ಸುಮರ್ ಡೇಟಾ ಇಂಟೆಲಿಜೆನ್ಸ್ ಕಂಪನಿಯಾದ ಆ್ಯಕ್ಸಿಸ್ ಮೈ ಇಂಡಿಯಾ ಬಿಡುಗಡೆ ಮಾಡಿರುವ ಇಂಡಿಯಾ ಕನ್ಸುಮರ್ ಸೆಂಟಿಮೆಂಟ್ ಇಂಡೆಕ್ಸ್ (CSI) ವರದಿಯಲ್ಲಿ ಮೋದಿ ಅವರೇ ದೇಶದ ಪ್ರಭಾವಶಾಲಿ ವ್ಯಕ್ತಿ ಎಂಬುದಾಗಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಒಟ್ಟು 10,124 ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ ಶೇ.65ರಷ್ಟು ಜನ ಗ್ರಾಮೀಣ ಪ್ರದೇಶದವರು ಹಾಗೂ ಶೇ.35ರಷ್ಟು ಮಂದಿ ನಗರ ಪ್ರದೇಶದವರಾಗಿದ್ದಾರೆ.
ಕೊರೊನಾ ನಿರ್ವಹಣೆ, ಮೂಲ ಸೌಕರ್ಯ ಅಭಿವೃದ್ಧಿ, ಸಮಾಜ ಕಲ್ಯಾಣ ಯೋಜನೆಗಳು ಸೇರಿ ಹಲವು ಯೋಜನೆಗಳು ಕೇಂದ್ರದ ಬಿಜೆಪಿ ಸರ್ಕಾರದ ಪ್ರಮುಖ ಸಾಧನೆಗಳಾಗಿವೆ ಎಂಬುದು ಜನರ ಅಭಿಪ್ರಾಯವಾಗಿದೆ. ಇನ್ನು ಶೇ.52ರಷ್ಟು ಜನ ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಸಮಾಧಾನಕರವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಹಾಗೆಯೇ, ಶೇ.72ರಷ್ಟು ಮಂದಿ 2023ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಹೊಂದುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.