ಮುಂಬೈ: ದೇಶದಲ್ಲಿ ದಿನೇದಿನೆ ಎಚ್3ಎನ್2 (H3N2 Virus) ಸೋಂಕಿನಿಂದ ಮೃತಪಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುವ ಜತೆಗೆ ಮೃತಪಡುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಆತಂಕ ಮೂಡಿಸಿದೆ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಎಚ್3ಎನ್2 ಸೋಂಕಿನಿಂದ ಬಳಲುತ್ತಿದ್ದ 73 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪುಣೆ ಜಿಲ್ಲೆ ಪಿಂಪ್ರಿ-ಚಿಂಚ್ವಾಡ್ ಕೈಗಾರಿಕಾ ಪಟ್ಟಣದಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಎಚ್3ಎನ್2 ಇನ್‌ಫ್ಲುಯೆಂಜಾ ಸೋಂಕು ದೃಢಪಟ್ಟಿತ್ತು. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಹುತೇಕರ ಆರೋಗ್ಯ ಸ್ಥಿರ
ಮಹಾರಾಷ್ಟ್ರದಲ್ಲಿ ಇದುವರೆಗೆ 32 ಮಂದಿಗೆ ಎಚ್3ಎನ್2 ಸೋಂಕು ತಗುಲಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಬಹುತೇಕರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ತುಸು ಆತಂಕ ಹೆಚ್ಚಿಸಿದೆ. ದೇಶದಲ್ಲಿ ಒಟ್ಟು 600ಕ್ಕೂ ಅಧಿಕ ಎಚ್3ಎನ್2 ಕೇಸ್‌ಗಳು ಪತ್ತೆಯಾಗಿದ್ದು, ಇದುವರೆಗೆ ಎಂಟು ಜನರನ್ನು ಸೋಂಕು ಬಲಿ ಪಡೆದಂತಾಗಿದೆ.
ಮಹಾರಾಷ್ಟ್ರ, ಗುಜರಾತ್, ದೆಹಲಿ, ಒಡಿಶಾ, ಪುದುಚೇರಿ, ಕರ್ನಾಟಕದಲ್ಲಿಯೇ ಹೆಚ್ಚಿನ ಸೋಂಕಿತರಿದ್ದಾರೆ. ಆದಾಗ್ಯೂ, ಕರ್ನಾಟಕದಲ್ಲೂ ಸೋಂಕಿಗೆ ಒಬ್ಬ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಎಚ್3ಎನ್2 ಸೋಂಕಿಗೆ ತುತ್ತಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದರು. ದಿನೇದಿನೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರವು ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ಕೊರೊನಾ ಏರಿಕೆ, 6 ರಾಜ್ಯಗಳಿಗೆ ಕೇಂದ್ರ ಪತ್ರ
ದೇಶದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆಯೂ ಜಾಸ್ತಿಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಪತ್ರ ಬರೆದಿದೆ. ಕೊರೊನಾ ನಿತ್ಯ ಪ್ರಕರಣಗಳ ಸಂಖ್ಯೆ ನಾಲ್ಕು ತಿಂಗಳ ಬಳಿಕ 700 ದಾಟಿದ ಕಾರಣ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ ಹಾಗೂ ತೆಲಂಗಾಣಕ್ಕೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ನಿತ್ಯ ತಪಾಸಣೆ ಜಾಸ್ತಿಯಾಗಬೇಕು. ಕೊರೊನಾ ತಪಾಸಣೆ ಜತೆಗೆ ಲಸಿಕೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಬೆಂಗಳೂರಿನಲ್ಲಿ ಹೆಚ್ಚಿನ ನಿಗಾ
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್3ಎನ್2 ಕುರಿತು ಹೆಚ್ಚು ನಿಗಾವಹಿಸಲು ನಿರ್ಧರಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಸರ್ಕಾರಿ ಜನರಲ್ ಆಸ್ಪತ್ರೆ, ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಕ್ಲಿನಿಕಲ್ ಆಡಿಟ್‌ಗೆ ಸೂಚಿಸಲಾಗಿದೆ. ವಯೋಮಾನ ಆಧಾರದಲ್ಲಿ ರೋಗಿಗಳ ರೋಗ ಲಕ್ಷಣ ಏನಿದೆ? ಯಾವಾಗಿನಿಂದ ರೋಗ ಲಕ್ಷಣವಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
ಇದನ್ನೂ ಓದಿ: H3N2 Virus: ಎಚ್3ಎನ್2 ಸೋಂಕಿಗೆ ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವು; ಕೊವಿಡ್ 19 ಕೂಡ ಬಾಧಿಸುತ್ತಿತ್ತು