ಮುಂಬೈ: ಮಹಾರಾಷ್ಟ್ರದ ಮುಂಬೈಗೆ (Mumbai) ಶನಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸುಮಾರು 29,400 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಪ್ರಧಾನಿ, ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿ ಕುರಿತು ಪ್ರಸ್ತಾಪಿಸಿದರು. “ಕಳೆದ 3-4 ವರ್ಷದಲ್ಲಿ ದೇಶದಲ್ಲಿ 8 ಕೋಟಿ ಹೊಸ ಉದ್ಯೋಗ (New Jobs) ಸೃಷ್ಟಿಯಾಗಿವೆ. ಆ ಮೂಲಕ ನಕಲಿ ಸುದ್ದಿ, ವದಂತಿ ಹರಡುತ್ತಿರುವವನ್ನು ಇವು ಸುಮ್ಮನಾಗಿಸಿವೆ” ಎಂದು ಹೇಳಿದರು.
“ಉದ್ಯೋಗ ಸೃಷ್ಟಿಯ ಕುರಿತು ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ನೀಡಿದೆ. ಕಳೆದ 3-4 ವರ್ಷದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಆರ್‌ಬಿಐ ನೀಡಿದ ಈ ಅಂಕಿ-ಅಂಶಗಳು ಸುಳ್ಳು ಸುದ್ದಿ ಹರಡುವವರು, ಅಜೆಂಡಾ ಬಿತ್ತುವವರನ್ನು ಸುಮ್ಮನಾಗಿಸಿವೆ. ಯಾರು ಹೂಡಿಕೆ, ಮೂಲ ಸೌಕರ್ಯ ಹಾಗೂ ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದರೋ, ಅವರೆಲ್ಲರ ಬಣ್ಣ ಈಗ ಬಯಲಾಗಿದೆ. ಇಂತಹ ಪಿತೂರಿಗಳನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ” ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಕುಟುಕಿದರು.
The development projects launched in Mumbai today will enhance connectivity, significantly upgrade the city's infrastructure and greatly benefit its citizens. https://t.co/7Xt7oSdceO
— Narendra Modi (@narendramodi) July 13, 2024
“ದೇಶದ ಜನರಿಗೆ ಎನ್‌ಡಿಎ ಮೇಲೆ ಅಪಾರ ವಿಶ್ವಾಸವಿದೆ. ಎನ್‌ಡಿಎ ಸರ್ಕಾರ ಮಾತ್ರ ಸ್ಥಿರತೆಯನ್ನು ಕಾಪಾಡಲು ಸಾಧ್ಯ ಎಂದು ನಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಸಣ್ಣ ಹಾಗೂ ಬೃಹತ್ ಹೂಡಿಕೆದಾರರು ನಮ್ಮ ಸರ್ಕಾರ ಮತ್ತೆ ಬಂದಿರುವುದನ್ನು ಸ್ವಾಗತಿಸಿದ್ದಾರೆ. ಮೂರನೇ ಅವಧಿಯಲ್ಲಿ ನಮ್ಮ ಕೆಲಸವು ಇನ್ನಷ್ಟು ಕ್ರಿಪ್ರವಾಗಿ ಆಗುತ್ತದೆ, ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬುದಾಗಿ ಹೇಳಿದ್ದೆ. ಅದರಂತೆ ಈಗ ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ” ಎಂದು ತಿಳಿಸಿದರು.
ಮಹಾರಾಷ್ಟ್ರದ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ಮಹಾರಾಷ್ಟ್ರವು ವಿಕಸಿತ ಭಾರತ ನಿರ್ಮಾಣ ಮಾಡುವ ದಿಸೆಯಲ್ಲಿ ಮಹತ್ವದ ರಾಜ್ಯವಾಗಿದೆ. ಮಹಾರಾಷ್ಟ್ರವು ಉದ್ಯಮ, ಕೈಗಾರಿಕೆ, ಕೃಷಿ ಹಾಗೂ ಹಣಕಾಸು ವಿಭಾಗದಲ್ಲಿ ಪ್ರಬಲವಾಗಿದೆ. ಇದರಿಂದಾಗಿಯೇ ಮುಂಬೈ ನಗರವು ದೇಶದ ವಾಣಿಜ್ಯ ನಗರಿಯಾಗಿದೆ. ಮುಂಬೈಯನ್ನು ವಿಶ್ವದಲ್ಲೇ ಬೃಹತ್ ಹಣಕಾಸು ಶಕ್ತಿಯನ್ನಾಗಿ ರೂಪಿಸುವುದು ನನ್ನ ಗುರಿಯಾಗಿದೆ” ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇದ್ದರು.
ಇದನ್ನೂ ಓದಿ: Modi In Austria: ಭಾರತ ಜಗತ್ತಿಗೆ ಬುದ್ಧನನ್ನು ಕೊಟ್ಟಿದೆ, ಯುದ್ಧವನ್ನಲ್ಲ; ಆಸ್ಟ್ರಿಯಾದಲ್ಲಿ ಮೋದಿ ಮಾತಿನ ಮೋಡಿ