ಶ್ರೀನಗರ: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 130ಕ್ಕೂ ಅಧಿಕ ಜನ ಮೃತಪಟ್ಟ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಜಮ್ಮು-ಕಾಶ್ಮೀರದಲ್ಲೂ ಹಬ್ಬದ ಆಚರಣೆ ವೇಳೆಯೇ ಸೇತುವೆ ಕುಸಿದಿದೆ. ಪುಟ್ಟ ಸೇತುವೆಯೊಂದು ಕುಸಿದ (Footbridge Collapse) ಪರಿಣಾಮ 80 ಜನರಿಗೆ ಗಾಯಗಳಾಗಿದ್ದು, ಜನರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ.
ಉಧಮ್‌ಪುರ ಜಿಲ್ಲೆ ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದಲ್ಲಿ ನೂರಾರು ಜನ ಬೈಸಾಕಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಗ್ರಾಮದ ಎಲ್ಲೆಡೆಯೂ ಸಂಭ್ರಮ ಮನೆಮಾಡಿತ್ತು. ಇದೇ ವೇಳೆ ಕಾಲ್ಸೇತುವೆಯೊಂದು ಏಕಾಏಕಿ (Footbridge) ಕುಸಿದಿದೆ. ಇದರಿಂದಾಗಿ ಏಕಕಾಲಕ್ಕೆ ನೂರಾರು ಜನ ಬೇಣಿ ಸಂಗಮಕ್ಕೆ ಕುಸಿದ ಕಾರಣ ಹೆಚ್ಚಿನ ಜನರಿಗೆ ಗಾಯಗಳಾಗಿವೆ. ನೀರಿಗೆ ಬಿದ್ದವರ ರಕ್ಷಣೆಗೆ ಭಾರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
20-25 ಜನರ ಪರಿಸ್ಥಿತಿ ಗಂಭೀರ
ಸೇತುವೆ ಕುಸಿತದ ತೀವ್ರತೆಗೆ ಜನರು ನೀರಿಗೆ ಮಾತ್ರವಲ್ಲ, ಬಂಡೆಗಲ್ಲುಗಳ ಮೇಲೆ ಬಿದ್ದಿದ್ದಾರೆ. ಮುರಿದ ಸೇತುವೆ ಮಧ್ಯೆಯೇ ಸಿಲುಕಿ ತುಂಬ ಜನರ ತಲೆಗೆ ಪೆಟ್ಟಾಗಿದೆ. ಇದುವರೆಗೆ 80ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಇವರಲ್ಲಿ 20-25 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. “ಗಾಯಗೊಂಡ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಪರಿಸ್ಥಿತಿ ಗಂಭೀರ ಇರುವ 6-7 ಮಂದಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ” ಎಂದು ಚೆನಾನಿ ಮುನ್ಸಿಪಾಲಿಟಿ ಅಧ್ಯಕ್ಷ ಮಾಣಿಕ್ ಗುಪ್ತಾ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವಿಡಿಯೊ
ದುರಂತ ಸಂಭವಿಸುತ್ತಲೇ ಪೊಲೀಸರು ಸೇರಿ ಹಲವು ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಕ್ಷಿಪ್ರವಾಗಿ ಜನರನ್ನು ರಕ್ಷಣೆ ಮಾಡಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಇದೇ ರೀತಿ ಗುರುವಾರವಷ್ಟೇ (ಮಾರ್ಚ್ 13) ಪೂಂಚ್ ಜಿಲ್ಲೆಯಲ್ಲಿ ಕಟ್ಟಡದ ಚಾವಣಿಯೊಂದು ಕುಸಿದು 43 ಜನ ಮೃತಪಟ್ಟಿದ್ದರು.
ಕಳೆದ ವರ್ಷ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ದುರಂತದಲ್ಲಿ 130ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು, ಖುದ್ದು ಮೋದಿ ಅವರೇ ಸೇತುವೆ ಕುಸಿತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ದುರಸ್ತಿಯಾದ ಒಂದೇ ವಾರದಲ್ಲಿ ಸೇತುವೆ ಕುಸಿದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದರ ಕುರಿತು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Sikkim Avalanche: ಸಿಕ್ಕಿಂ ಹಿಮಕುಸಿತಕ್ಕೆ 6 ಜನ ಬಲಿ, ಹಿಮದಲ್ಲಿ ಸಿಲುಕಿದ್ದಾರೆ ಇನ್ನೂ 150ಕ್ಕೂ ಅಧಿಕ ಪ್ರವಾಸಿಗರು!