ಮುಜಾಫರ್ನಗರ: ಉತ್ತರ ಪ್ರದೇಶದಲ್ಲಿ 80 ವರ್ಷದ ವೃದ್ಧನೊಬ್ಬ ತಮ್ಮ 1.5 ಕೋಟಿ ರೂಪಾಯಿ ಆಸ್ತಿಯನ್ನು ಅಲ್ಲಿನ ರಾಜ್ಯಪಾಲರ ಹೆಸರಿಗೆ ಬರೆದಿದ್ದಾರೆ. ಐವರು ಮಕ್ಕಳಿದ್ದರೂ, ತಮ್ಮ ಆಸ್ತಿಯನ್ನೆಲ್ಲ ಅವರು ರಾಜ್ಯಪಾಲರಿಗೆ ಬರೆದುಕೊಟ್ಟು, ಸರ್ಕಾರದ ವತಿಯಿಂದ ಶಾಲೆಯನ್ನೋ, ಆಸ್ಪತ್ರೆಯನ್ನೋ ನಿರ್ಮಾಣ ಮಾಡಿ ಎಂದು ಹೇಳಿದ್ದಾರೆ. ತಮ್ಮ ಮಕ್ಕಳ ಬಗ್ಗೆ ತೀವ್ರವಾಗಿ ನೊಂದುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.
ವೃದ್ಧನ ಹೆಸರು ನಾಥು ಸಿಂಗ್. ಉತ್ತರ ಪ್ರದೇಶದ ಬಿರಾಲ್ ಗ್ರಾಮದವರು. ಇವರು ರೈತ. ಇವರಿಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಸೇರಿ ಐವರು ಮಕ್ಕಳಿದ್ದಾರೆ. ಹೆಣ್ಣುಮಕ್ಕಳೆಲ್ಲ ಗಂಡನ ಮನೆ ಸೇಡಿದ್ದಾರೆ. ವೃದ್ಧ ನಾಥು ಸಿಂಗ್ ಅವರು ಪುತ್ರ-ಸೊಸೆಯೊಂದಿಗೆ ಇದ್ದರು. ಆದರೆ ಅವರಿಬ್ಬರೂ ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಚೆನ್ನಾಗಿ ನೋಡಿಕೊಳ್ಳಲಿಲ್ಲ. ಹೀಗಾಗಿ ವೃದ್ಧಾಶ್ರಮಕ್ಕೆ ಸೇರಬೇಕಾಯಿತು. ವೃದ್ಧಾಶ್ರಮಕ್ಕೆ ಬಂದ ನನ್ನನ್ನು ನೋಡಲು ಮಗ-ಸೊಸೆ, ಹೆಣ್ಣುಮಕ್ಕಳು ಯಾರೂ ಬರಲಿಲ್ಲ. ಹೀಗಾಗಿ ಅವರ್ಯಾರೂ ನನ್ನ ಆಸ್ತಿಗೆ ಉತ್ತರಾಧಿಕಾರಿಗಳಾಗಲು ಯೋಗ್ಯರಲ್ಲ ಎಂದು ನಾಥು ಸಿಂಗ್ ತಿಳಿಸಿದ್ದಾರೆ. ಹಾಗೇ, ನಾಥು ಸಿಂಗ್ ಅವರು ತಮ್ಮ 1.5 ಕೋಟಿ ರೂಪಾಯಿ ಮೌಲ್ಯದ 10 ಬಿಘಾ ಕೃಷಿ ಭೂಮಿ ಮತ್ತು ಮನೆಯನ್ನು ಉತ್ತರ ಪ್ರದೇಶ ರಾಜ್ಯಪಾಲರಿಗೆ ಬರೆದುಕೊಟ್ಟಿದ್ದನ್ನು ಬುಧಾನಾ ತೆಹ್ಸಿಲ್ನ ಸಬ್ ರಿಜಿಸ್ಟ್ರಾರ್ ಪಂಕಜ್ ಜೈನ್ ಅವರು ದೃಢಪಡಿಸಿದ್ದಾರೆ.
ಇದನ್ನೂ ಓದಿ: Waqf Board Property: ಕಾಂಗ್ರೆಸ್ ಇದ್ದಾಗ ವಕ್ಫ್ ಬೋರ್ಡ್‌ಗೆ ನೀಡಿದ್ದ 123 ಆಸ್ತಿ ಹಿಂಪಡೆಯಲು ಕೇಂದ್ರ ನಿರ್ಧಾರ
ನಾಥು ಸಿಂಗ್ ಇರುವ ವೃದ್ಧಾಶ್ರಮ ಮುಖ್ಯಸ್ಥೆ ರೇಖಾ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ‘ನಾಥು ಸಿಂಗ್ ಅವರು ತಮ್ಮ ಆಸ್ತಿಯನ್ನು ರಾಜ್ಯಪಾಲರ ಹೆಸರಿಗೆ ಬರೆದು, ಅಫಿಡಿವಿಟ್ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಅವರು ಮೃತಪಟ್ಟ ಬಳಿಕ ತಮ್ಮ ಮಕ್ಕಳು ಯಾರೂ ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಬಾರದು ಎಂದೂ ಹೇಳಿದ್ದಾರೆಂದು ತಿಳಿಸಿದ್ದಾರೆ.