ನವದೆಹಲಿ: ಈಶಾನ್ಯ ಭಾರತದ ತ್ರಿಪುರಾ ರಾಜ್ಯ ವಿಧಾನಸಭೆಗೆ ಗುರುವಾರ ಚುನಾವಣೆ ನಡೆದಿದ್ದು(Tripura Election 2023), ಒಟ್ಟು ಶೇ.81ರಷ್ಟು ಮತದಾನವಾಗಿದೆ. ಅಂತಿಮ ಲೆಕ್ಕದಲ್ಲಿ ಈ ಮತದಾನ ಪ್ರಮಾಣ ಇನ್ನೂ ಹೆಚ್ಚಾಗಬಹುದು. ಒಟ್ಟು 60 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಒಟ್ಟಾರೆ ಶಾಂತಿಯುತವಾಗಿ ಮತದಾನ ನಡೆದಿದ್ದರೂ, ಅಲ್ಲಿಲ್ಲಿ ಹಿಂಸಾತ್ಮಕ ಘಟನೆಗಳು ನಡೆದ ವರದಿಯಾಗಿದೆ. ಈ ಘಟನೆಗಳಲ್ಲಿ ಸಿಪಿಎಂ ನಾಯಕ ಸೇರಿದಂತೆ ಎಡ ಪಕ್ಷದ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ರಾಜ್ಯದ ಸುಮಾರು 40ರಿಂದ 45 ಕಡೆ ಮತದಾನ ಯಂತ್ರಗಳ ಕೈಕೊಟ್ಟ ವರದಿಯಾಗಿದೆ.
ಬಿಜೆಪಿಯ ಪರವಾಗಿ ಕಿಡಿಗೇಡಿಗಳು ಮತದಾನ ಮಾಡದಂತೆ ಜನರಿಗೆ ತಡೆದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಮಾಣಿಕ್ ಸರ್ಕಾರ ಆರೋಪಿಸಿದ್ದಾರೆ. ಇದೇ ವೇಳೆ, ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಹೇಳಲಾಗುತ್ತಿರುವ ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್ ದೆಬ್ಬರ್ಮಾ ಅವರೂ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
60 ಸೀಟುಗಳನ್ನು ಹೊಂದಿರುವ ತ್ರಿಪುರಾ ವಿಧಾನಸಭೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ-ಐಪಿಎಫ್‌ಟಿ ಕೂಟ, ಸಿಪಿಎಂ-ಕಾಂಗ್ರೆಸ್ ಮೈತ್ರಿ ಕೂಟ ಹಾಗೂ ಹೊಸದಾಗಿ ರಾಜಕೀಯಕ್ಕೆ ಅಖಾಡಕ್ಕೆ ಇಳಿದಿರುವ ತಿಪ್ರಾ ಮೋಥಾ ನಡುವೆ ಫೈಟ್ ಇದ್ದು, ಜನರು ಯಾರಿಗೆ ಆಶೀರ್ವದಿಸಿದ್ದಾರೆಂಬದು ಮಾರ್ಚ್ 2ರಂದು ತಿಳಿಯಲಿದೆ. ಒಂದೊಮ್ಮೆ ಯಾವ ಕೂಟಕ್ಕೂ ಬಹುಮತ ಬರದಿದ್ದರೆ, ತಿಪ್ರಾ ಮೋಥಾ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಮರಳಿ ಅಧಿಕಾರವನ್ನು ಉಳಿಸಿಕೊಳ್ಳುವ ವಿಶ್ವಾಸವಿದ್ದು, ಕಾಂಗ್ರೆಸ್-ಸಿಪಿಎಂ ಕೂಟ ಈ ಬಾರಿ ಗೆದ್ದೇ ಗೆಲ್ಲುವ ಛಲವನ್ನು ಹೊಂದಿದೆ.
ಇದನ್ನೂ ಓದಿ: Erode East bye-election: ಈರೋಡ್ ಬೈಎಲೆಕ್ಷನ್, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಕಮಲ್ ಹಾಸನ್
ಬಿಜೆಪಿ ಮತ್ತು ಅದರ ಮಿತ್ರ ಪಕ್ಷವೂ 55 ಸ್ಥಾನಗಳಲ್ಲಿಸ್ಪರ್ಧಿಸಿದ್ದರೆ, ಸಿಪಿಎಂ 47 ಮತ್ತು ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಿಂದಿನ ರಾಜಮನೆತನದ ಕುಡಿ ಪ್ರದ್ಯೋತ್ ದೆಬ್ಬರ್ಮಾ ನೇತೃತ್ವದ ತಿಪ್ರಾ ಮೋಥಾ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ತೃಣಮೂಲ ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಕಿದೆ. ಎಲ್ಲ ಅಭ್ಯರ್ಥಿಗಳ ಹಣೆಬರಹ ಗುರುವಾರ ನಿರ್ಧಾರವಾಗಿದ್ದು, ಮಾರ್ಚ್ 2ರಂದು ಫಲಿತಾಂಶ ಪ್ರಕಟವಾಗಲಿದೆ.