ಲಖನೌ : ಮನುಷ್ಯನ ಮನಸ್ಸಿಗೆ ಬಹಳ ಹತ್ತಿರದ ಪ್ರಾಣಿ ಎಂದರೆ ಅದು ನಾಯಿ ಎಂಬುದು ಬಹುತೇಕರ ಅಭಿಪ್ರಾಯ. ಅದೆಷ್ಟೋ ಜನರು ನಾಯಿಯನ್ನು ಸಾಕಿ, ಅದನ್ನು ಅತ್ಯಂತ ಮುದ್ದುಮಾಡುತ್ತಾರೆ. ಆದರೆ, ಹೆಚ್ಚು ಬಲಿಷ್ಟವಾಗಿರುವ ವಿವಿಧ ತಳಿಯ ನಾಯಿಗಳನ್ನು ಸಾಕುವಾಗ ಕೆಲವು ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿ. ಯಾಕೆಂದರೆ ಇಲ್ಲಿ ಒಬ್ಬ ವ್ಯಕ್ತಿ ಸಾಕಿದ್ದ ನಾಯಿ, ಆತನ ತಾಯಿಯನ್ನೇ ಕೊಂದಿದೆ. ಅಂದಹಾಗೇ, ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಖನೌನ ಕೈಸರ್ಬಾಗ್ ಎಂಬಲ್ಲಿ. 82 ವರ್ಷದ ಸುಶೀಲಾ ತ್ರಿಪಾಠಿ ಮೃತ ಮಹಿಳೆ.
ಕೈಸರ್ಬಾಗ್ನ ಬೆಂಗಾಲಿ ತೊಲಾ ಪ್ರದೇಶದ ನಿವಾಸಿಯಾದ ಅಮಿತ್ ಎಂಬಾತ ಜಿಮ್ ತರಬೇತುದಾರರಾಗಿದ್ದು, ಮನೆಯಲ್ಲಿ ಎರಡು ನಾಯಿಗಳನ್ನು ಸಾಕಿದ್ದರು. ಒಂದು ಅಮೆರಿಕನ್ ತಳಿಯಾದ ಪಿಟ್ಬುಲ್ಲಾ ಮತ್ತು ಲ್ಯಾಬ್ರಡಾರ್ ತಳಿಯ ನಾಯಿಗಳಾಗಿವೆ. ಮಹಿಳೆ ಮೇಲೆ ದಾಳಿ ಮಾಡಿದ ನಾಯಿಗೆ ಬ್ರೌನಿ ಎಂದು ಹೆಸರು ಇಡಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ನಾಯಿಯನ್ನು ಅಮಿತ್ ತಂದಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ| Viral video: ಈ 90ರ ಅಜ್ಜಿ 120 ಬೀದಿ ನಾಯಿಗಳ ಅನ್ನದಾತೆ! ಬಿಸಿಬಿಸಿ ಬಿರಿಯಾನಿನೂ ಕೊಡ್ತಾರೆ!
ಮಂಗಳವಾರ (ಜು.12) ಬೆಳಗ್ಗೆ 6 ಗಂಟೆ ಸುಮಾರಿಗೆ ಮಹಿಳೆ ಮನೆಯಲ್ಲಿ ಒಬ್ಬರೇ ಇರುವಾಗ ಈ ದುರ್ಘಟನೆ ನಡೆದಿದೆ. ಮಗ ಜಿಮ್ನಿಂದ ವಾಪಸ್ ಮನೆಗೆ ಬಂದಾಗ ಮನೆಯಲ್ಲಿ ರಕ್ತದ ಮಡುವಿನಲ್ಲಿ ತನ್ನ ತಾಯಿ ನರಳಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ತಕ್ಷಣವೇ ಬಲರಾಮ್ಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ, ತೀವ್ರ ರಕ್ತಸ್ರಾವದಿಂದ ತಾಯಿ ಸುಶೀಲಾ ತ್ರಿಪಾಠಿ ಸಾವನ್ನಪ್ಪಿದ್ದಾರೆ. ಬಳಿಕ ಸುಶೀಲಾ ತ್ರಿಪಾಠಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸುಶೀಲಾ ದೇಹದಲ್ಲಿ ಕುತ್ತಿಗೆಯಿಂದ ಹೊಟ್ಟೆಯ ಭಾಗದವರೆಗೂ ತೀವ್ರ ಗಾಯಗಳಾಗಿರುವುದು ಬಹಿರಂಗಗೊಂಡಿದೆ.
ಅಕ್ಕಪಕ್ಕದ ಮನೆಯವರ ಮಾಹಿತಿಯ ಪ್ರಕಾರ, ಬೆಳಿಗ್ಗೆ 6 ಗಂಟೆಗೆ ನಾಯಿ ಜೋರಾಗಿ ಬೊಗಳುತ್ತಿರುವುದು ಮತ್ತು ಸುಶೀಲಾ ಅವರು ಅಳುತ್ತಾ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿರುವುದು ಕೇಳಿಸುತ್ತಿತ್ತು. ನಾವು ಕೂಡಲೇ ಮನೆಯ ಬಳಿ ಹೋದೆವು. ಆದರೆ, ಒಳಗಿನಿಂದ ಬಾಗಿಲು ಲಾಕ್ ಆಗಿದ್ದರಿಂದ ನಾವು ಒಳಗೆ ಹೋಗಲು ಸಾಧ್ಯವಾಗಲಿಲ್ಲ.. ಸ್ವಲ್ಪ ಹೊತ್ತಿನ ಬಳಿಕ ಸುಶೀಲಾ ಅವರ ಮಗ ಬಂದು ಬಾಗಿಲು ತೆರೆದರು ಆಗ ತೀವ್ರ ರಕ್ತಸ್ರಾವದಿಂದ ಸುಶೀಲಾ ಅವರು ನೆಲದ ಮೇಲೆ ಬಿದ್ದಿದ್ದರು ಎಂದು ತಿಳಿಸಿದ್ದಾರೆ.
ಇದನ್ನು ಓದಿ|ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ, ನಿತ್ಯ 300-400 ಶ್ವಾನಗಳಿಗೆ ವ್ಯಾಕ್ಸಿನ್ ಗುರಿ: ಪ್ರಭು ಚೌಹಾಣ್