ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೇರಿ ಬಳಿಯ ಜಮೀನಿನಲ್ಲಿ ಬಾಂಬ್ (Kannur Bomb Blast) ಸ್ಫೋಟಗೊಂಡು 86 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕುಡಕ್ಕಲಮ್ ಗ್ರಾಮದ ಆಯಿನಾತ್ ವೇಲಾಯುಧನ್ (Aayinatt Velayudhan) ಅವರು ಮೃತರು. ಆಯಿನಾತ್ ವೇಲಾಯುಧನ್ ಅವರು ಜಮೀನಿನಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋದಾಗ, ಬಾಂಬ್ ಇದ್ದ ಪೊಟ್ಟಣ ಕಂಡಿದೆ. ಅದನ್ನು ಅವರು ಎತ್ತಿಕೊಂಡು, ತೆಗೆದು ನೋಡಿದಾಗ ಅದು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಸ್ಟೀಲ್‌ನಿಂದ ತಯಾರಿಸಿದ ಬಾಂಬ್‌ಅನ್ನು ಗಮನಿಸದ ವ್ಯಕ್ತಿಯು, ಪೊಟ್ಟಣ ತೆಗೆದು, ಅದನ್ನು ಒಡೆಯಲು ಯತ್ನಿಸಿದ್ದಾರೆ. ಆಗ ಅದು ಸ್ಫೋಟಗೊಂಡು ಆಯಿನಾತ್ ವೇಲಾಯುಧನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು ಎಂದು ಮೂಲಗಳು ತಿಳಿಸಿವೆ.
“ಬಾಂಬ್ ಸ್ಫೋಟದ ಕುರಿತು ತನಿಖೆ ಆರಂಭಿಸಲಾಗಿದೆ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಲಾಗುತ್ತದೆ. ಮರಣೋತ್ತರ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ದೊರೆಯಲಿದೆ” ಎಂಬುದಾಗಿ ತಲಸ್ಸೇರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಇದುವರೆಗೆ ಜಮೀನಿನಲ್ಲಿ ಬಾಂಬ್ ಹೇಗೆ ಬಂತು? ಅದನ್ನು ಎಲ್ಲಿ ತಯಾರಿಸಲಾಗಿತ್ತು? ಅದನ್ನೇಕೆ ಜಮೀನಿನಲ್ಲಿ ಬಿಸಾಡಲಾಗಿತ್ತು ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಕಣ್ಣೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾಂಬ್‌ಗಳ ಉತ್ಪಾದನೆ ಹಾಗೂ ಸ್ಫೋಟದಂತಹ ಪ್ರಕರಣಗಳು ಹೆಚ್ಚಾಗಿವೆ. ಆರು ತಿಂಗಳ ಹಿಂದೆಯೇ ಕಸ ಸಂಗ್ರಹಿಸುವ ವ್ಯಕ್ತಿಯೊಬ್ಬರು ಕಸ ಆಯ್ದುಕೊಳ್ಳುವಾಗ ಬಾಂಬ್ ಸ್ಫೋಟಗೊಂಡು ಗಾಯಗೊಂಡಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರ ಮನೆಯ ಮೇಲೂ ಬಾಂಬ್ ದಾಳಿ ನಡೆದಿತ್ತು. ತಂಡವೊಂದು ಬಾಂಬ್ ತಯಾರಿಸುವಾಗಲೇ ಸ್ಫೋಟಗೊಂಡು ಸಿಪಿಎಂ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರು. ಇಂತಹ ಪ್ರಕರಣಗಳನ್ನು ನಿಗ್ರಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್ ಸ್ಫೋಟ, ಐವರಿಗೆ ಗಾಯ