Site icon Vistara News

Wayanad Landslide: ಸಾವಿನ ಸಂಖ್ಯೆ 89; ವಯನಾಡು ಭೂಕುಸಿತದ ಭೀಕರತೆಯ ವಿಡಿಯೊ, ಫೋಟೊಗಳು ಇಲ್ಲಿವೆ

Wayanad Landslide

ತಿರುವನಂತಪುರಂ: ಕೇರಳದ ವಯನಾಡು ಈಗ ಅಕ್ಷರಶಃ ಮಸಣದಂತಾಗಿದೆ. ಭಾರಿ ಮಳೆ (Wayanad Rains), ರಣಭೀಕರ ಭೂಕುಸಿತದಿಂದಾಗಿ (Wayanad Landslide) ಎಲ್ಲೆಂದರಲ್ಲಿ ಹೆಣಗಳ ರಾಶಿ, ಕೊಚ್ಚಿಹೋದ ಊರುಗಳು, ಭೂಕುಸಿತದಿಂದ ಸಂಪರ್ಕ ಸಂಪೂರ್ಣವಾಗಿ ಕಡಿತ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌, ಎಸ್‌ಟಿಆರ್‌ಎಫ್‌ ಸಿಬ್ಬಂದಿ, ಹೆಣ್ಣುಮಕ್ಕಳು, ಮಕ್ಕಳ ದುಸ್ಥಿತಿಯೇ ಕಾಣಿಸುತ್ತಿದೆ. ಸಾವಿರಾರು ಜನರ ಬದುಕು ಈಗ ಮೂರಾಬಟ್ಟೆಯಾಗಿದೆ. ಸಾವಿನ ಸಂಖ್ಯೆಯಂತೂ ಏರಿಕೆಯಾಗುತ್ತಲೇ ಇದ್ದು, ಇದುವರೆಗೆ 89 ಮಂದಿ ಮೃತಪಟ್ಟಿದ್ದಾರೆ. ವಯನಾಡು ಭೂಕುಸಿತ, ಮಳೆಯ ಭೀಕರತೆಯನ್ನು ಸಾರುವ, ಎಂತಹವರನ್ನೂ ಗಾಬರಿ ಬೀಳಿಸುವ ವಿಡಿಯೊಗಳು ಹಾಗೂ ಫೋಟೊಗಳು ಇಲ್ಲಿವೆ.

ವಯನಾಡಿನಲ್ಲಿ ಭೂಕುಸಿತ ಸಂಭವಿಸುತ್ತಲೇ ನೂರಾರು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಇದುವರೆಗೆ 300ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸಾವಿರಾರು ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ರವಾನಿಸಲಾಗಿದೆ. ಇಷ್ಟಾದರೂ, ಹಲವು ಜನ ಅವಶೇಷಗಳ ಅಡಿಯಲ್ಲೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕಾಗಿ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ, ಸರ್ಕಾರಿ ಸಂಸ್ಥೆ ಸಿಬ್ಬಂದಿ ಸೇರಿದಂತೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲು 43 ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸಹ ಸಜ್ಜುಗೊಳಿಸಲಾಗಿದೆ.

ಮಂಗಳವಾರ ಮುಂಜಾನೆ 2ರಿಂದ4 ಗಂಟೆಯ ನಡುವೆ ಸಂಭವಿಸಿದ ಭೂಕುಸಿತದಿಂದ ಮುಂಡಕೈ ಮತ್ತು ಚೂರಲ್‌ಮಾಲಾ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಕುಸಿದ ಸೇತುವೆ, ಕೊಚ್ಚಿ ಹೋದ ರಸ್ತೆ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಚೂರಲ್‌ಮಾಲಾದಲ್ಲಿ ಒಟ್ಟು 250 ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಮಾಡುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ
ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿ ಬಿದ್ದಿರುವ ವಾಹನ
ಭೂಕುಸಿತ, ಮಳೆಯ ಕಾರಣ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ
ಭಾರಿ ಮಳೆಯಿಂದಾಗಿ ಊರಿಗೆ ಊರೇ ಮುಳುಗಿ ಹೋಗಿದೆ

ಇದನ್ನೂ ಓದಿ: Shiradi Landslide: ಕೇರಳದ ಬೆನ್ನಿಗೇ ಶಿರಾಡಿ ಘಾಟಿಯಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ ಸಿಲುಕಿದ ಕಾರುಗಳು, ಟ್ಯಾಂಕರ್‌

Exit mobile version