Site icon Vistara News

Mosque Attack: ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದವರ ಮೇಲೆ ದಾಳಿ, ಕೇಸರಿ ಧ್ವಜ ಹಿಡಿದು ಹಲ್ಲೆ, 9 ಜನಕ್ಕೆ ಗಾಯ

9 Injured As Mob Attacks People Offering Namaz At Sonipat Mosque

9 Injured As Mob Attacks People Offering Namaz At Sonipat Mosque

ಚಂಡೀಗಢ: ರಾಮನವಮಿ ಹಬ್ಬದ ದಿನ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಗುಜರಾತ್‌ ಸೇರಿ ಹಲವು ರಾಜ್ಯಗಳಲ್ಲಿ ಹಿಂದು-ಮುಸ್ಲಿಮರ ಮಧ್ಯೆ ಗಲಭೆ ನಡೆದ ಬೆನ್ನಲ್ಲೇ ಹರಿಯಾಣದ ಸೋನಿಪತ್‌ನಲ್ಲಿರುವ ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದವರ ಮೇಲೆ ದಾಳಿ (Mosque Attack) ನಡೆಸಲಾಗಿದ್ದು, 9 ಜನರಿಗೆ ಗಾಯಗಳಾಗಿವೆ. ಪೊಲೀಸರು ಇದುವರೆಗೆ 16 ಆರೋಪಿಗಳನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಘಟನೆ ನಡೆದಿದ್ದು, ಪ್ರಕರಣವು ತಡವಾಗಿ ಸುದ್ದಿಯಾಗಿದೆ. ಸೋನಿಪತ್‌ ಜಿಲ್ಲೆ ಸ್ಯಾಂಡಲ್‌ ಕಲನ್‌ ಗ್ರಾಮದಲ್ಲಿ ಭಾನುವಾರ ರಾತ್ರಿ ಮುಸ್ಲಿಮರು ಮಸೀದಿಯಲ್ಲಿ ನಮಾಜ್‌ ಮಾಡುತ್ತಿದ್ದರು. ಇದೇ ವೇಳೆ 15-20 ಜನರ ಗುಂಪೊಂದು ಮುಸ್ಲಿಮರ ಮೇಲೆ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಾರಣ 9 ಮಂದಿಗೆ ಗಾಯಗಳಾಗಿವೆ. ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದವರು ಇದೇ ಗ್ರಾಮದವರು ಎಂದು ತಿಳಿದುಬಂದಿದೆ.

ದಾಳಿ ಕುರಿತ ವಿಡಿಯೊ

ನಮಾಜ್‌ ಮಾಡುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದವರು ಮಸೀದಿಯ ಕೆಲ ಭಾಗಗಳಿಗೂ ಹಾನಿ ಮಾಡಿದ್ದಾರೆ. ಇದಾದ ಬಳಿಕ ಮಸೀದಿ ಮೇಲೆ ಏರಿದ ದುಷ್ಕರ್ಮಿಗಳು ಕೇಸರಿ ಧ್ವಜ ಹಾರಿಸಿದ್ದಾರೆ. ದುಷ್ಕರ್ಮಿಗಳು ಕೇಸರಿ ಧ್ವಜ ಹಿಡಿದು ನಿಂತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಗ್ರಾಮದ ಜನರು ಹಿಂದು ಸಂಘಟನೆಗಳ ಕಾರ್ಯಕರ್ತರೇ ದಾಳಿ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

16 ಜನರ ಬಂಧನ

ಘಟನೆ ನಡೆಯುತ್ತಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದು, ಇದುವರೆಗೆ 16 ಜನರನ್ನು ಬಂಧಿಸಿದ್ದಾರೆ. ಹಾಗೆಯೇ, 19 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವಿಡಿಯೊಗಳು ಹಾಗೂ ಫೋಟೊಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಮುಸ್ಲಿಮರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೂ ಗುರುಗ್ರಾಮ ಹಳ್ಳಿಯೊಂದರ ಮಸೀದಿಯ ಮೇಲೆ 200ಕ್ಕೂ ಅಧಿಕ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಮಸೀದಿಯಲ್ಲಿ ಮುಸ್ಲಿಮರು ನಮಾಜ್‌ ಮಾಡುವ ವೇಳೆಯೇ ದಾಳಿ ನಡೆಸಲಾಗಿತ್ತು. ಗ್ರಾಮದಲ್ಲಿ ಮುಸ್ಲಿಮರ ನಾಲ್ಕೇ ಮನೆಗಳು ಇದ್ದರೂ ಮಸೀದಿ ಮೇಲೆ ದಾಳಿ ನಡೆಸಲಾಗಿತ್ತು.

Exit mobile version