Site icon Vistara News

Nitin Gadkari: ಏಪ್ರಿಲ್‌ 1ರಿಂದ ಸರ್ಕಾರದ 9 ಲಕ್ಷ ವಾಹನಗಳು ರಸ್ತೆಗಿಳಿಯಲ್ಲ ಎಂದ ನಿತಿನ್‌ ಗಡ್ಕರಿ, ಕಾರಣವೇನು?

Nitin Gadkari

ನವದೆಹಲಿ: ದೇಶದಲ್ಲಿ ಈಗಾಗಲೇ ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿ (Vehicle Scrappage Policy) ನೀತಿ ಜಾರಿಗೆ ತಂದಿದೆ. 10 ವರ್ಷ ಹಳೆಯದಾದ ಖಾಸಗಿ ಡೀಸೆಲ್‌ ವಾಹನಗಳು ಹಾಗೂ 15 ವರ್ಷ ಹಳೆಯದಾದ ಪೆಟ್ರೋಲ್‌ ವಾಹನಗಳನ್ನು ಓಡಿಸುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ವಾಹನ ಗುಜರಿ ನೀತಿ ಅಳವಡಿಸಿಕೊಳ್ಳುತ್ತಿದ್ದು, “2023ರ ಏಪ್ರಿಲ್‌ 1ರಿಂದ 15 ವರ್ಷ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳು ರಸ್ತೆ ಇಳಿಯುವುದಿಲ್ಲ” ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಮಾಹಿತಿ ನೀಡಿದ್ದಾರೆ.

“15 ವರ್ಷ ತುಂಬಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾರಿಗೆ ಬಸ್‌ಗಳು, ಸರ್ಕಾರಿ ಇಲಾಖೆಗಳ ವಾಹನಗಳು ಸೇರಿ ಎಲ್ಲ 9 ಲಕ್ಷ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಇವುಗಳ ಬದಲಾಗಿ ಪರ್ಯಾಯ ಇಂಧನ ಆಧಾರಿತ ವಾಹನಗಳ ಸಂಚಾರ ಆರಂಭಿಸಲಾಗುತ್ತದೆ. ಇದರಿಂದ ವಾಯುಮಾಲಿನ್ಯವು ಭಾರಿ ಪ್ರಮಾಣದಲ್ಲಿ ಕುಂಠಿತವಾಗಲಿದೆ” ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

“ಪರಿಸರ ರಕ್ಷಣೆ ಹಾಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅವಲಂಬನೆ ಕಡಿಮೆಗೊಳಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿಯೇ 2022ರ ಏಪ್ರಿಲ್‌ 1ರಿಂದ ವಾಹನ ಗುಜರಿ ನೀತಿ ಜಾರಿಗೆ ಬಂದಿದೆ. ಈಗ ಸರ್ಕಾರದ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಈ ಆದೇಶವು ರಕ್ಷಣಾ ಇಲಾಖೆ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದ ವಾಹನಗಳಿಗೆ ಅನ್ವಯವಾಗುವುದಿಲ್ಲ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 2024 ಜನವರಿ ಹೊತ್ತಿಗೆ Bengaluru-Chennai Expressway ಲೋಕಾರ್ಪಣೆ: ಗಡ್ಕರಿ ಭರವಸೆ

Exit mobile version