ನವದೆಹಲಿ: ಪ್ರಸಕ್ತ ವರ್ಷ ಪೂರ್ತಿ ವಿಧಾನಸಭೆ ಚುನಾವಣೆಗಳಿವೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇದೆ. ಹಾಗಾಗಿ, ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು, ವಾಕ್ಸಮರ, ರಾಜಕೀಯ ಮೇಲಾಟ ಜಾಸ್ತಿಯಾಗಿದೆ. ಇನ್ನು ಪ್ರತಿಪಕ್ಷಗಳಂತೂ ತಮ್ಮ ಪಕ್ಷಗಳ ನಾಯಕರ ಮನೆಗಳ ಮೇಲೆ ಸಿಬಿಐ, ಇ.ಡಿ ನಡೆಸುತ್ತಿರುವ ದಾಳಿಗಳನ್ನು ಇಟ್ಟುಕೊಂಡು ಜನಾಭಿಪ್ರಾಯ ರೂಪಿಸುತ್ತಿವೆ. ಇದರ ಭಾಗವಾಗಿಯೇ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಪಕ್ಷಗಳು ಪತ್ರ ಬರೆದಿವೆ. ಆದರೆ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ರಣತಂತ್ರ ರೂಪಿಸಿದ್ದು, ಬಿಜೆಪಿಯೇತರ ಸರ್ಕಾರವಿರುವ 9 ರಾಜ್ಯಗಳಲ್ಲಿ 9 ಸುದ್ದಿಗೋಷ್ಠಿ ನಡೆಸಿ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಲು ತೀರ್ಮಾನಿಸಿದೆ.
ಪ್ರತಿಪಕ್ಷಗಳ ಆರೋಪವೇನು?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಹಲವು ರಾಜ್ಯಗಳ ಸಿಎಂಗಳು ಸಹಿ ಹಾಕಿರುವ ಪತ್ರವನ್ನು ಕಳೆದ ಭಾನುವಾರ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗಿದೆ. “ಭಾರತ ಪ್ರಜಾಪ್ರಭುತ್ವ ದೇಶ ಎಂಬುದನ್ನು ನೀವು ಒಪ್ಪುತ್ತೀರಿ ಎಂದು ನಾವು ಭಾವಿಸಿದ್ದೇವೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಪಕ್ಷಗಳ ಧ್ವನಿಯನ್ನು ಹುದುಗಿಸಲಾಗುತ್ತಿದೆ. ಹಾಗಾಗಿ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರದ ಬದಲು ನಿರಂಕುಶ ದೇಶವಾಗುತ್ತಿದೆ” ಎಂದು ಜರಿದಿದ್ದಾರೆ. ಆದರೆ, ಕಾಂಗ್ರೆಸ್ ಸಿಎಂಗಳು ಮಾತ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿಲ್ಲ.
ಬಿಜೆಪಿ ರಣತಂತ್ರವೇನು?
ಬಿಜೆಪಿಯೇತರ ರಾಜ್ಯಗಳಲ್ಲಿ ಸಾಲು ಸಾಲು ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಆಯಾ ರಾಜ್ಯಗಳಲ್ಲಿ ಬಿಜೆಪಿ ನಾಯಕರಿಗೆ ಸುದ್ದಿಗೋಷ್ಠಿ ನಡೆಸಲು ಪಕ್ಷದ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ, ದೆಹಲಿಯಲ್ಲಿ ಮನೋಜ್ ತಿವಾರಿ, ಬಿಹಾರದಲ್ಲಿ ಸಂಜಯ್ ಜೈಸ್ವಾಲ್, ತೆಲಂಗಾಣದಲ್ಲಿ ಸಂಜಯ್ ಬಂಡಿ ಸೇರಿ ಒಂಬತ್ತು ರಾಜ್ಯಗಳಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ, ಪ್ರತಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಮನೋಜ್ ತಿವಾರಿ ಸುದ್ದಿಗೋಷ್ಠಿ ನಡೆಸಿ ಆರೋಪಗಳಿಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ತ.ನಾಡು ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಪದಾಧಿಕಾರಿಗಳು