ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ (Anantnag Encounter) ಐದನೇ ದಿನಕ್ಕೆ ಕಾಲಿಟ್ಟಿದೆ. ಸತತ 90 ಗಂಟೆಯಿಂದ ಉಗ್ರರಿಗಾಗಿ ಹತ್ಲಾಂಗ ಹಾಗೂ ಉರಿ ಸೆಕ್ಟರ್‌ಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದರೂ ಇದುವರೆಗೆ ಉಗ್ರರನ್ನು ಹೊಡೆದುರುಳಿಸಲು ಸಾಧ್ಯವಾಗಿಲ್ಲ. ಅದರಲ್ಲೂ, ಕಳೆದ ಐದು ದಿನಗಳಲ್ಲಿ ಬಾರಾಮುಲ್ಲಾ ಸೇರಿ ಜಮ್ಮು-ಕಾಶ್ಮೀರದಲ್ಲಿ (Jammu Kashmir) ಮೂರು ಎನ್‌ಕೌಂಟರ್ ನಡೆದಿವೆ. ಮೂವರು ಉಗ್ರರನ್ನು ಸದೆಬಡಿಯಲಾಗಿದೆ. ಇಷ್ಟಾದರೂ ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಸಫಲವಾಗಿಲ್ಲ. ಹಾಗಾದರೆ, ಅನಂತನಾಗ್ ಜಿಲ್ಲೆಯಲ್ಲಿ ಸೈನಿಕರಿಗೆ ಎದುರಾಗುತ್ತಿರು ಸವಾಲುಗಳೇನು?
ಬೆಟ್ಟ, ಮಳೆ, ಗುಹೆ, ಅರಣ್ಯವೇ ಸೈನಿಕರಿಗೆ ಶತ್ರು
ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆ ಕೈಗೊಳ್ಳುವ ಯೋಧರಿಗೆ ಪ್ರಕೃತಿಯೇ ದೊಡ್ಡ ಶತ್ರುವಾಗಿದೆ. ಒಂದೆಡೆ ದಟ್ಟ ಅರಣ್ಯದಲ್ಲಿ ಉಗ್ರರನ್ನು ಪತ್ತೆ ಹಚ್ಚುವುದು ಕಷ್ಟವಾದರೆ, ಮತ್ತೊಂದೆಡೆ ಬೆಟ್ಟ-ಗುಡ್ಡಗಳಲ್ಲಿ ಕಾರ್ಯಾಚರಣೆ ನಡೆಸುವುದು ಇನ್ನಷ್ಟು ಕಷ್ಟವಾಗುತ್ತಿದೆ. ಹಾಗಾಗಿಯೇ, ಎನ್‌ಕೌಂಟರ್ ಐದನೇ ದಿನಕ್ಕೆ ಕಾಲಿಟ್ಟರೂ ಲಷ್ಕರೆ ತಯ್ಬಾದ 2-3 ಉಗ್ರರು ಸಿಗುತ್ತಿಲ್ಲ. ಇಷ್ಟಾದರೂ ಯೋಧರು ಹಿಂದಡಿ ಇಡುತ್ತಿಲ್ಲ. ಹಾಗಾಗಿ, ಕಾರ್ಯಾಚರಣೆಯು ಐದನೇ ದಿನಕ್ಕೆ ಕಾಲಿಟ್ಟಿದೆ. ಡ್ರೋನ್‌ಗಳನ್ನು ಬಳಸಿ ಉಗ್ರರನ್ನು ಪತ್ತೆಹಚ್ಚಲು ಶನಿವಾರ (ಸೆಪ್ಟೆಂಬರ್ 16) ಪ್ರಯತ್ನಿಸಲಾಯಿತಾದರೂ ಮಳೆ ಬಂದ ಕಾರಣ ಅದಕ್ಕೂ ಅಡಚಣೆಯಾಯಿತು.
ಬಾರಾಮುಲ್ಲಾದಲ್ಲಿ ಮೂವರು ಉಗ್ರರ ಹತ್ಯೆ
#BaramullaEncounterUpdate: Another #terrorist killed (Total 03). Search #operation in progress. Further details shall follow.@JmuKmrPolice https://t.co/apSo4RhtFp
— Kashmir Zone Police (@KashmirPolice) September 16, 2023
ಅದರಲ್ಲೂ ಕಾಕೆರ್‌ನಾಗ್ ಅರಣ್ಯ ಪ್ರದೇಶದಲ್ಲಿ ತುಂಬ ಗುಹೆಗಳಿವೆ. ಗುಹೆಗಳಲ್ಲಿ ಅಡಗಿರುವ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಲು ಹೋದರೆ ಬ್ಯಾಕಪ್ ಅಥವಾ ಕವರ್ (ಗುಂಡಿನ ದಾಳಿ ಮಾಡುವ ಯೋಧನಿಗೆ ಬೇರೆ ಯೋಧರು ಕೂಡ ದಾಳಿ ಮೂಲಕವೇ ಭದ್ರತೆ ಒದಗಿಸುವುದು) ಸಿಗುವುದಿಲ್ಲ. ಇದರಿಂದಾಗಿ ಎನ್‌ಕೌಂಟರ್ ಜಟಿಲವಾಗುತ್ತಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 12-13ರ ರಾತ್ರಿಯೇ ಎನ್‌ಕೌಂಟರ್ ಆರಂಭವಾಗಿದ್ದು, ಇದುವರೆಗೆ ಭಾರತೀಯ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ: Baramulla Encounter: ಸೇರಿಗೆ ಸವ್ವಾಸೇರು; ಕಾಶ್ಮೀರದಲ್ಲಿ ಮೂವರು ಉಗ್ರರ ಉಡೀಸ್
ತರಬೇತಿ ಪಡೆದ, ಶಸ್ತ್ರಸಜ್ಜಿತ ಉಗ್ರರು
ಕಾಕೆರ್‌ನಾಗ್ ಅರಣ್ಯ ಪ್ರದೇಶದಲ್ಲಿ ಐದು ದಿನಗಳಿಂದ ಎನ್‌ಕೌಂಟರ್ ನಡೆಯುತ್ತಿದ್ದು, ಇಷ್ಟಾದರೂ ಉಗ್ರರು ಸಿಗುತ್ತಿಲ್ಲ. ಅದರಲ್ಲೂ ಸಾಮಾನ್ಯ ಉಗ್ರರಾಗಿದ್ದರೆ ಇಷ್ಟೊಂದು ಸುದೀರ್ಘ ಕಾರ್ಯಾಚರಣೆ ನಡೆಯುವುದಿಲ್ಲ. ಕಳೆದ ವರ್ಷ ಲಷ್ಕರೆ ತಯ್ಬಾ ಸೇರಿದ ಉಜೈರ್ ಖಾನ್ ಸೇರಿ ಮೂವರು ಉಗ್ರರು ಅರಣ್ಯದಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಇದೆ. ಅವರ ಬಳಿ ಹೆಚ್ಚಿನ ಶಸ್ತ್ರಾಸ್ತ್ರಗಳಿದ್ದು, ಹೆಚ್ಚಿನ ತರಬೇತಿ ಪಡೆದವರಾಗಿದ್ದಾರೆ. ಹಾಗಾಗಿ, ಅವರನ್ನು ಕೊಂದೇ ತೀರಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಸೇನೆಯು ಸತತ ಕಾರ್ಯಾಚರಣೆ ನಡೆಸುತ್ತಿದೆ.