Site icon Vistara News

15ವರ್ಷದ ಹುಡುಗನ ಮೆದುಳನ್ನೇ ತಿಂದು ಕತೆ ಮುಗಿಸಿದ ಅಮೀಬಾ; ಹೊಳೆ ನೀರ ಸ್ನಾನದಿಂದಲೇ ಸಾವು!

Stream

ಕೇರಳದಲ್ಲಿ 15ವರ್ಷದ ಹುಡುಗನೊಬ್ಬ ಅಪರೂಪದ ಮೆದುಳು ಸೋಂಕಿಗೆ (Brain Infection) ಒಳಗಾಗಿ ಮೃತಪಟ್ಟಿದ್ದು, ಆತಂಕ ಮೂಡಿಸಿದೆ. ಇಲ್ಲಿನ ಅಲಪ್ಪುಳ ಜಿಲ್ಲೆಯಲ ಪನವಲ್ಲಿ ಎಂಬಲ್ಲಿ ಹುಡುಗನೊಬ್ಬ ಹೀಗೆ ಮೆದುಳು ಇನ್​ಫೆಕ್ಷನ್​​ನಿಂದ ಮೃತಪಟ್ಟಿದ್ದಾನೆ. ಈತ ಪ್ರಾಥಮಿಕ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ (Primary Amoebic Meningoencephalitis) ಕಾಯಿಲೆಯಿಂದ ಬಳಲುತ್ತಿದ್ದ. ಅಂದರೆ ಜೀವಂತ ಅಮೀಬಾಗಳು ಮೆದುಳಿನೊಳಗೆ ಸೇರಿಕೊಂಡು, ಅವು ಮೆದುಳನ್ನೇ ತಿನ್ನಲು ಶುರು ಮಾಡಿದಾಗ (Brain Eating Amoeba) ಉಂಟಾಗುವ ಕಾಯಿಲೆ. ಅಂದಹಾಗೇ, ಈ ಮೆದುಳು ತಿನ್ನುವ ಜಾತಿಯ ಅಮೀಬಾಕ್ಕೆ Naegleria Fowleri (ನೇಗ್ಲೇರಿಯಾ ಫೌಲೆರಿ) ಎಂದು ಹೆಸರು. ಈಗ ಹುಡುಗನ ತಲೆಯೊಳಗೆ ಸೇರಿಕೊಂಡು ಜೀವವನ್ನೇ ತಿಂದಿದೆ.

ನೇಗ್ಲೇರಿಯಾ ಫೌಲೆರಿ ಅಮೀಬಾ ಸಾಮಾನ್ಯವಾಗಿ ನೀರಿನಲ್ಲಿ ನೆಲೆಸಿರುತ್ತದೆ. ಮನುಷ್ಯರ ಮೂಗಿನ ಮೂಲಕ ಮೆದುಳು ಸೇರಿಕೊಳ್ಳುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ನೇಗ್ಲೇರಿಯಾ ಫೌಲೆರಿ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೇ, ಕೇರಳದ ಈ 15ವರ್ಷದ ಹುಡುಗ ಕಲುಷಿತ ನೀರಿನಲ್ಲಿ ಸ್ನಾನ ಮಾಡಿದ್ದರಿಂದಲೇ ಅಮೀಬಾ ಇವನ ದೇಹ ಸೇರಿಕೊಂಡಿತ್ತು ಎಂದು ವೈದ್ಯರು ಅಂದಾಜಿಸಿದ್ದಾರೆ.

ಕಳೆದ ವಾರದಿಂದ ಹುಡುಗ ಸಿಕ್ಕಾಪಟೆ ಜ್ವರದಿಂದ ಬಳಲುತ್ತಿದ್ದ. ಏನೇ ಮಾಡಿದರೂ ಜ್ವರ ಕಡಿಮೆ ಆಗದೆ ಇದ್ದಾಗ ಅವನನ್ನು ಸಮೀಪದ ಕ್ಲಿನಿಕ್​ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿಯೇ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಜ್ವರದ ಕಾರಣವನ್ನು ಕ್ಲಿನಿಕ್​ನಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಭಾನುವಾರ ಹುಡುಗ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾದ ಕಾರಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಹಲವು ಬಗೆಯ ತಪಾಸಣೆ ಮಾಡಿದ ಬಳಿಕ, ಹುಡುಗನ ಮೆದುಳನ್ನು ನೇಗ್ಲೇರಿಯಾ ಫೌಲೆರಿ ಅಮೀಬಾ ತಿನ್ನುತ್ತಿರುವುದು ಗೊತ್ತಾಯಿತು. ಈ ಹುಡುಗ ಪ್ರತಿದಿನವೂ ತನ್ನ ಮನೆ ಸಮೀಪದ ಒಂದು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ. ಇದೇ ಅವನ ಸೋಂಕಿಗೆ ಕಾರಣ ಆಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಕಾಲ ಮಿಂಚಿ ಹೋಗಿತ್ತು. ಹುಡುಗನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Doctor Kindness: ಅಪಘಾತದಲ್ಲಿ ಮೆದುಳು ಹೊರಬಂದ ಮಹಿಳೆಗೆ ತುರ್ತು ಚಿಕಿತ್ಸೆಯಿಂದ ಪುನರ್ಜನ್ಮ; ವೈದ್ಯರಿಗೆ ಮೆಚ್ಚುಗೆ

ಆರೋಗ್ಯ ಸಚಿವರಿಂದ ಎಚ್ಚರಿಕೆ
15ವರ್ಷದ ಹುಡುಗ ಮೆದುಳು ಸೋಂಕಿನಿಂದ ಮೃತಪಟ್ಟ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ. ಹಾಗೇ, ಇದೊಂದು ಅಪರೂಪದ ಪ್ರಕರಣ ಎಂದೂ ಹೇಳಿದ್ದಾರೆ. ಕೇರಳದಲ್ಲಿ ಪ್ರಾಥಮಿಕ ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಸೋಂಕಿನಿಂದ ಈ ಹಿಂದೆ ಐದು ಸಾವುಗಳು ಆಗಿದ್ದವು. ಮೊದಲ ಬಾರಿಗೆ 2016ರಲ್ಲಿ ಅಲಪ್ಪುಳದ ತಿರುಮಲ ವಾರ್ಡ್​​ನಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿತ್ತು. ಅದಾದ ಮೇಲೆ 2019 ಮತ್ತು 2020ರಲ್ಲಿ ಮಲಪ್ಪುರಂನಲ್ಲಿ 2 ಕೇಸ್​ಗಳು ಕಾಣಿಸಿಕೊಂಡವು. 2020ರಲ್ಲಿ ತ್ರಿಶೂರ್​ನಲ್ಲಿ ಕೂಡ ಒಬ್ಬರಿಗೆ ಅಮೀಬಾ ಸೋಂಕು ತಗುಲಿತ್ತು. ಅದಾದ ಮೇಲೆ 2020ರಲ್ಲಿ ಕೊಯಿಕ್ಕೋಡ್​​ನಲ್ಲಿ ಒಬ್ಬರಲ್ಲಿ, 2022ರಲ್ಲಿ ತ್ರಿಶೂರ್​​ನಲ್ಲಿ ಒಬ್ಬರಿಗೆ ಈ ಸೋಂಕು ತಗುಲಿ ಮೃತಪಟ್ಟಿದ್ದರು ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

Exit mobile version