ಪುದುಚೇರಿ: ರಸ್ತೆ ಗುಂಡಿ ಎಂಬುದು ಜಾಗತಿಕ ಸಮಸ್ಯೆ. ಭಾರತದಲ್ಲಂತೂ ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿನಗರಗಳಲ್ಲೂ ಒಂದಲ್ಲ ಒಂದು ಕಡೆ ಗುಂಡಿ ಬಿದ್ದ ರಸ್ತೆ (Pothole)ಯನ್ನು ನೋಡಿಯೇ ನೋಡುತ್ತೇವೆ. ಹೀಗೆ ಪುದುಚೇರಿಯಲ್ಲೂ ಕೂಡ ರಸ್ತೆಯಲ್ಲಿ ಗುಂಡಿ ಬಿದ್ದು, ಆ ಗುಂಡಿಯ ಕಾರಣಕ್ಕೆ ಹಿರಿಯ ನಾಗರಿಕರೊಬ್ಬರು ಬೈಕ್ನಿಂದ ಬಿದ್ದು ಏಟು ಮಾಡಿಕೊಂಡಿದ್ದಾರೆ. ಇಷ್ಟೇ ಆದರೆ ಅದು ದೊಡ್ಡ ಸುದ್ದಿ ಎಂದು ಹಲವರಿಗೆ ಅನ್ನಿಸಲಿಕ್ಕಿಲ್ಲ, ಆದರೆ ಆ ವಯಸ್ಸಾದ ನಾಗರಿಕ ರಸ್ತೆ ಗುಂಡಿಯಲ್ಲಿ ಬೈಕ್ನಿಂದ ಬಿದ್ದ ನಂತರ ಅವರ ಮೊಮ್ಮಗ ಮಾಡಿದ ಕೆಲಸವೀಗ ಸಖತ್ ಸುದ್ದಿಯಾಗಿದೆ ಮತ್ತು ಆ ಹುಡುಗ ಮಾದರಿ ಎನ್ನಿಸಿದ್ದಾನೆ.
ಬಾಲಕನ ಹೆಸರು ಮಸೀಲ್ಮಣಿ. ಈತ ಪುದುಚೇರಿಯ ಸೆಂಧಂತ್ ಏರಿಯಾದ ನಿವಾಸಿ. ಆತನ ಅಜ್ಜ ರೈತರು. ಇತ್ತೀಚೆಗೆ ಸ್ಕೂಟರ್ನಲ್ಲಿ ಪುದುಚೇರಿ-ಪತುಕನ್ನು ಮಾರ್ಗದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಯ ಕಾರಣಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದರು. ಅದನ್ನು ನೋಡಿ ಮಸೀಲ್ಮಣಿ ತುಂಬ ನೊಂದುಕೊಂಡಿದ್ದ. ತನ್ನ ಅಜ್ಜನಿಗಾದ ಸ್ಥಿತಿ ಇನ್ಯಾರಿಗೂ ಬರಬಾರದು. ಯಾರೂ ಅಪಘಾತಕ್ಕೀಡಾಗಬಾರದು ಎಂಬ ಕಾರಣಕ್ಕೆ, ಆತ ಬಿದ್ದ ಗುಂಡಿಗೆ ಸಿಮೆಂಟ್ ತುಂಬಲು ನಿರ್ಧರಿಸಿ, ಅದನ್ನು ಒಬ್ಬನೇ ಕಾರ್ಯಗತಗೊಳಿಸಿದ. ಅಷ್ಟೇ ಅಲ್ಲ, ಅಲ್ಲೇ ಅಕ್ಕಪಕ್ಕದಲ್ಲಿದ್ದ ಎಲ್ಲ ಗುಂಡಿಗಳನ್ನೂ ಒಬ್ಬನೇ ಮುಚ್ಚಿದ್ದಾನೆ.
ಇದನ್ನೂ ಓದಿ: ಇಂಜಿನಿಯರ್ ಪಾಲಿಗೆ ಸಾವಿನ ಕೂಪವಾದ ರಸ್ತೆ ಗುಂಡಿ; ನಿಯಂತ್ರಣ ತಪ್ಪಿ ಬಿದ್ದ ಯುವತಿ ಮೇಲೆ ಟ್ರಕ್ ಹರಿದು ದುರ್ಮರಣ
ಈ ಹುಡುಗ ಮೊದಲು ತನ್ನ ಹಳ್ಳಿಯಲ್ಲೆಲ್ಲ ಅಡ್ಡಾಡಿದ. ಒಂದೊಂದು ಕಡೆಗೂ ಬಿದ್ದಿದ್ದ ಮರಳು, ಜಲ್ಲಿಕಲ್ಲು ಅವನಿಗೆ ಸಿಕ್ಕವು. ಸಿಮೆಂಟ್ ಆ ಹುಡುಗನ ಮನೆಯೇ ಇತ್ತು. ಬೇಕಾದ ವಸ್ತುಗಳನ್ನೆಲ್ಲ ಸಂಗ್ರಹಿಸಿ, ಪುದುಚೇರಿ-ಪತುಕನ್ನು ರಸ್ತೆಯಲ್ಲಿ ಬಿದ್ದಿದ್ದ ಎಲ್ಲ ಗುಂಡಿಗಳನ್ನೂ ಮುಚ್ಚಿದ್ದಾನೆ. ಅವನ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ. ನೆರೆಹೊರೆಯವರೆಲ್ಲ ಸೇರಿ ಬಾಲಕನಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಇನ್ನು ಮಾಜಿ ಶಾಸಕ ವಯ್ಯಾಪುರಿ ಮಣಿಕ್ನಂದನ್ ಅವರು ಒಂದು ಪುಸ್ತಕವನ್ನು ಕೊಟ್ಟು ಅಭಿನಂದಿಸಿದ್ದಾರೆ
ದೇಶ ಮಟ್ಟದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ