ಡೆಹ್ರಾಡೂನ್: ಕೊವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿ ತನ್ನ ತಂದೆ-ತಾಯಿಯನ್ನು ಕಳೆದುಕೊಂಡ ಬಳಿಕ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿ ಆಸ್ತಿಗೆ ಒಡೆಯನಾಗಿದ್ದಾನೆ. ಇದೊಂದು ಮನಕಲಕುವ ಕತೆಯಾದರೂ, ಸುಖಾಂತ್ಯ ಕಂಡಿದೆ. ಅತ್ಯಂತ ಯಾತನಾಮಯ ಸಮಯಗಳನ್ನು ಎದುರಿಸಿದ ಬಾಲಕನೀಗ ಖುಷಿ ಕಾಲದಲ್ಲಿದ್ದಾನೆ.…ಭಿಕ್ಷುಕ ಬಾಲಕ ಕೋಟ್ಯಧಿಪತಿಯಾಗಿದ್ದು ಹೇಗೆ? ಇಲ್ಲಿದೆ ನೋಡಿ ಸ್ಟೋರಿ
ಇಲ್ಲಿ ಕಥಾನಾಯಕ ಅಂದರೆ ಪುಟ್ಟ ಬಾಲಕನ ಹೆಸರು ಶಹಜೇಬ್ ಆಲಂ. ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಪಾಂಡೋಲಿ ಎಂಬ ಹಳ್ಳಿಯಲ್ಲಿ ಅಪ್ಪ ಮೊಹಮ್ಮದ್ ನಾವೇದ್ ಮತ್ತು ಅಮ್ಮ ಇಮ್ರಾನಾ ಬೇಗಂ ಜತೆ ವಾಸವಾಗಿದ್ದ. ಅಪ್ಪನಿಗೆ ಅದೇನೋ ದೀರ್ಘಾವಧಿ ಕಾಯಿಲೆ. ಹಲವು ವರ್ಷಗಳಿಂದ ಬಳಲಿ 2019ರಲ್ಲಿ ತೀರಿಹೋದರು. ನಾವೇದ್ ಸಾಯುತ್ತಿದ್ದಂತೆ ಅವರ ಕುಟುಂಬದವರು ಅದರಲ್ಲೂ ಆತನ ಅಮ್ಮ, ಇಮ್ರಾನಾ ಬೇಗಂ ಅವರಿಗೆ ತೊಂದರೆ ಕೊಡಲು ಪ್ರಾರಂಭಿಸಿದರು. ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಕುಹಕ, ಗಲಾಟೆ. ಇನ್ನು ತಡೆಯಲಾಗದ ಸ್ಥಿತಿ ತಲುಪಿದ ಇಮ್ರಾನಾ ಬೇಗಂ ಮಗ ಶಹಜೇಬ್ನನ್ನು ಕರೆದುಕೊಂಡು ಯಮುನಾನಗರದಲ್ಲಿರುವ ತವರುಮನೆಗೆ ಬಂದರು. ಅಲ್ಲಿಯೂ ತುಂಬ ದಿನ ನೆಲೆಸಲಿಲ್ಲ. ಅಲ್ಲಿಂದಲೂ ಪುತ್ರನನ್ನು ಕರೆದುಕೊಂಡು ಉತ್ತರಾಖಂಡ್ನ ರೂರ್ಕೆಯಲ್ಲಿರುವ ಪಿರಾನ್ ಕಲಿಯಾರ್ ಪ್ರಾರ್ಥನಾ ಮಂದಿರ (ದರ್ಗಾ)ಕ್ಕೆ ಬಂದರು. ದಿನಗೂಲಿ, ಮನೆಗೆಲಸಗಳನ್ನು ಮಾಡುತ್ತಿದ್ದರು. ಈ ಅಮ್ಮ-ಮಗ ಎಲ್ಲಿದ್ದಾರೆ ಎಂಬುದು ಆಕೆಯ ಪತಿ ಮನೆ ಕಡೆಯವರಿಗಾಗಲೀ, ತವರು ಮನೆಯವರಿಗಾಗಲೀ ಗೊತ್ತೇ ಇರಲಿಲ್ಲ. ಇವರಿಬ್ಬರ ಬದುಕು ಹೀಗೇ ನಡೆಯುತ್ತಿತ್ತು. ಆದರೆ ಎರಡೇ ವರ್ಷದಲ್ಲಿ ಪುಟ್ಟ ಹುಡುಗ ಶಹಜೇಬ್ಗೆ ಮತ್ತೊಂದು ಆಘಾತ. 2021ರಲ್ಲಿ ಅಮ್ಮ ಇಮ್ರಾನಾ ಕೊವಿಡ್ 19 ಸೋಂಕಿನಿಂದ ಪ್ರಾಣಬಿಟ್ಟರು.
ಹುಡುಗ ಶಹಜೇಬ್ ಅನಾಥನಾದ. ಅದೇ ಪಿರಾನ್ ಕಲಿಯಾರ್ನಲ್ಲಿಯೇ ಉಳಿದುಕೊಂಡು, ಬದುಕಿಗಾಗಿ ಭಿಕ್ಷೆ ಎತ್ತಲು ಶುರು ಮಾಡಿದ. ಪ್ರತಿದಿನವೂ ಅಲ್ಲಿ-ಇಲ್ಲಿ ಸುತ್ತಾಡುತ್ತಿದ್ದ. ಭಿಕ್ಷೆ ಬೇಡಿ ಬಂದ ಹಣದಲ್ಲಿ ಹೊಟ್ಟೆಗೆ ಏನಾದರೂ ತಿನ್ನುತ್ತಿದ್ದ. ಮೈಮೇಲೆ ಮಾಸಿದ ಬಟ್ಟೆ, ಕೊಳಕಾದ-ಬಾಡಿದ ಮುಖ ಹೊತ್ತು ತಿರುಗುತ್ತಿದ್ದ. ಅದೇ ವೇಳೆ, ಇತ್ತ ಅವನ ತಂದೆ ಮನೆ ಕಡೆಯ ಸಂಬಂಧಿಕರು ಶಹಜೇಬ್ಗಾಗಿ ಹುಡುಕುತ್ತಿದ್ದರು. ಕಾರಣ ಅವನಿಗಾಗಿ ಕಾಯುತ್ತಿರುವ ಕೋಟ್ಯಂತರ ರೂ.ಮೌಲ್ಯದ ಆಸ್ತಿಯನ್ನು ಅವನಿಗೆ ಒದಗಿಸಿಕೊಡಬೇಕಿತ್ತು..!
ಯಾರ ಆಸ್ತಿ ಸಿಕ್ಕಿತು?
ಬಾಲಕ ಶಹಜೇಬ್ಗೆ ಸಿಕ್ಕಿದ್ದು ಅವನ ಅಜ್ಜನ ಅಂದರೆ ಮೃತ ತಂದೆ ಮೊಹಮ್ಮದ್ ನಾವೇದ್ ಅವರ ತಂದೆ ಮೊಹಮ್ಮದ್ ಯಾಕೂಬ್ನ ಆಸ್ತಿ. ನಾವೇದ್ ಸಾಯುತ್ತಿದ್ದಂತೆ ಉಯಿಲು ಬರೆದಿದ್ದ ಯಾಕೂಬ್, ‘ನನ್ನ ಎರಡು ಅಂತಸ್ತಿನ ಮನೆ, 5 ಬಿಘಾ ಭೂಮಿ ಸೇರಿ ಒಟ್ಟು 2 ಕೋಟಿ ರೂಪಾಯಿ ಆಸ್ತಿ, ನನ್ನ ಪುತ್ರ ನಾವೇದ್ನ ಮಗ ಶಹಜೇಬ್ಗೆ ಸೇರಬೇಕು’ ಎಂದು ಬರೆದಿಟ್ಟಿದ್ದರು. ಯಾಕೂಬ್ ಕೂಡ 2021ರಲ್ಲಿ ಮೃತಪಟ್ಟರು. ಆಗ ಆಸ್ತಿಯ ವಿಲ್ ನೋಡಿದ ಅವರ ಹತ್ತಿರದ ಸಂಬಂಧಿಕರು ಶಹಜೇಬ್ಗಾಗಿ ಹುಡುಕಾಟ ನಡೆಸಲು ಪ್ರಾರಂಭಿಸಿದರು. ಅವನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದರು. ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ಘೋಷಿಸಿದರು. ಅಂತಿಮವಾಗಿ ಕಲಿಯಾರ್ ಸಮೀಪದ ರಸ್ತೆಯಲ್ಲಿ ಬಾಲಕನನ್ನು ನೋಡಿದ ದಾರಿಹೋಕರೊಬ್ಬರು ಅವನನ್ನು ಕರೆದುಕೊಂಡು ಹೋಗಿ, ಮನೆಗೆ ಮುಟ್ಟಿಸಿದರು. ಸದ್ಯ ಹುಡುಗ ತನ್ನ ಕುಟುಂಬದವರೊಂದಿಗೆ ಇದ್ದಾನೆ. ಆತನೀಗ ಕೋಟ್ಯಧಿಪತಿಯಾಗಿದ್ದಾನೆ.
ಇದನ್ನೂ ಓದಿ: Viral Video | ಪಠಾಣ್ ‘ಕೇಸರಿ ಬಿಕಿನಿ’ ವಿವಾದದ ಬೆನ್ನಲ್ಲೇ ವೈರಲ್ ಆಯ್ತು ಸ್ಮೃತಿ ಇರಾನಿ ‘ಕೇಸರಿ ತುಂಡುಡುಗೆ’ ವಿಡಿಯೊ