ಚಂಡೀಗಢ: ವಿಮಾನದಲ್ಲಿಯೇ ಸಿಗರೇಟ್ ಸೇದಿದ ವೀಡಿಯೊ ವೈರಲ್ (Viral Video) ಆದ ಬೆನ್ನಲ್ಲೇ ಹರಿಯಾಣ ಮೂಲದ ಬಾಡಿ ಬಿಲ್ಡರ್ ಬಾಬಿ ಕಟಾರಿಯಾ ಅವರು ಮತ್ತೊಂದು ವಿವಾದಕ್ಕೆ ಸೃಷ್ಟಿಸಿದ್ದಾರೆ. ರೋಡ್ ಬ್ಲಾಕ್ ಮಾಡಿ ರಸ್ತೆ ಮಧ್ಯೆಯೇ ಎಣ್ಣೆ ಹೊಡೆಯುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಈ ಕುರಿತು ಉತ್ತರಾಖಂಡ ಪೊಲೀಸರು ಕಟಾರಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವಾಹನಗಳ ಓಡಾಟದಿಂದ ಸದಾ ಗಿಜುಗುಡುವ ಡೆಹ್ರಾಡೂನ್ ರಸ್ತೆಯ ಮಧ್ಯೆ ಕುರ್ಚಿ ಹಾಕಿಕೊಂಡು ಕುಳಿತ ಬಾಬಿ ಕಟಾರಿಯಾ, ಎಣ್ಣೆ ಹೊಡೆಯುವ ವೀಡಿಯೊ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ಸ್ಟಾರ್ ಒಬ್ಬ ಹೀಗೆ ರಸ್ತೆ ಬ್ಲಾಕ್ ಮಾಡಿ ಮದ್ಯ ಸೇವಿಸಿರುವ ಕುರಿತು ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿವೆ. ಸಾರ್ವಜನಿಕರ ಟೀಕೆಗೆ ಮಣಿದ ಪೊಲೀಸರು ಈಗ ಪ್ರಕರಣ ದಾಖಲಿಸಿದ್ದಾರೆ. ರೋಡ್ ಬ್ಲಾಕ್ ಮಾಡಿ ಮದ್ಯ ಸೇವಿಸಿದ ವೀಡಿಯೊವನ್ನು ಕಟಾರಿಯಾ ಅವರೇ ಜುಲೈ 28ರಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೀಗೆ ರಸ್ತೆ ಮಧ್ಯೆ ಮದ್ಯ ಸೇವಿಸಿದ ವೀಡಿಯೊ ಪೋಸ್ಟ್ ಮಾಡಿ ಉದ್ಧಟತನ ಮೆರೆದಿದ್ದಲ್ಲದೆ, “ರಸ್ತೆಗಳ ಮೇಲೆ ಎಂಜಾಯ್ ಮಾಡಲು ಇದು ಸಕಾಲʼʼ ಎಂಬ ಒಕ್ಕಣೆಯನ್ನೂ ಬರೆದಿರುವುದು ಸಾರ್ವಜನಿಕರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಕಟಾರಿಯಾ ಅವರ ಆಪ್ತರೊಬ್ಬರು ವೀಡಿಯೊ ಮಾಡಿ, ಅದಕ್ಕೆ “ರೋಡ್ ಅಪ್ನೆ ಬಾಪ್ ಕಿ” (ರಸ್ತೆ ನನ್ನ ಅಪ್ಪನದ್ದು) ಎಂಬ ಹಾಡು ಸೇರಿಸಿದ್ದೂ ಟೀಕೆಗೆ ಗುರಿಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಬಾಬಿ ಕಟಾರಿಯಾ ಅವರು ಸ್ಪೈಸ್ ಜೆಟ್ ವಿಮಾನದಲ್ಲಿ ಕುಳಿತು ಸಿಗರೇಟ್ ಸೇದಿದ ವೀಡಿಯೊ ವೈರಲ್ ಆಗಿತ್ತು. ಇದರ ಕುರಿತು ಸ್ಪಷ್ಟನೆ ನೀಡಿದ್ದ ಅವರು, “ಇದು ಉದ್ದೇಶಪೂರ್ವಕವಾಗಿಯೇ ಮಾಡಿದ ವೀಡಿಯೊ. ಹಾಗೊಂದು ವೇಳೆ ನನ್ನ ಬಳಿ ಲೈಟರ್ ಇದ್ದರೆ, ವಿಮಾನದ ಸಿಬ್ಬಂದಿ ಹೇಗೆ ನನ್ನನ್ನು ಒಳಗೆ ಬಿಡುತ್ತಿದ್ದರು” ಎಂದು ಪ್ರಶ್ನಿಸಿದರೂ. ಆದರೂ, ನಾಗರಿಕ ವಿಮಾನಯಾನ ಸಚಿವಾಲಯವು ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.