ನವದೆಹಲಿ: ಸಿನಿಮಾ ಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಜನರು ಹೊರಗಿನ ತಿಂಡಿಯನ್ನು ತರಬೇಕೇ ಅಥವಾ ತರಬಾರದೇ ಎಂಬುದನ್ನು ಮಾಲೀಕರು ನಿರ್ಧರಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಲಾಗಿದೆ.
ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ಪ್ರೇಕ್ಷಕರು ಆಹಾರ ಮತ್ತು ಪಾನೀಯವನ್ನು ಹೊರಗಿನಿಂದ ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕನ್ನು ಮಾಲೀಕರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಜೆಐ ಡಿ ವೈ ಚಂದ್ರಚೂಡ ಹಾಗೂ ಜಸ್ಟೀಸ್ ಪಿ ಎಸ್ ನರಸಿಂಹ ಅವರಿದ್ದ ಪೀಠವು ಈ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದೆ.
ಸಿನಿಮಾ ಮಂದಿರಗಳು ಜಿಮ್ ಅಲ್ಲ. ಅಲ್ಲಿ ನಿಮಗೇನೂ ಹೆಲ್ದೀ ಫುಡ್ ಬೇಕಾಗಿಲ್ಲ. ಅದು ಮನರಂಜನೆಯ ಸ್ಥಳವಾಗಿದೆ. ಹಾಗೆಯೇ ಅದೊಂದು ಖಾಸಗಿ ಆಸ್ತಿ. ಹಾಗಾಗಿ, ಅಲ್ಲಿನ ರೂಲ್ಸ್ ನಿರ್ಧರಿಸುವುದು ಮಾಲೀಕರಿಗೆ ಸಂಬಂಧಿಸಿದ್ದು. ಆಯುಧಗಳ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಅಥವಾ ಜಾತಿ ಮತ್ತು ಲಿಂಗ ಆಧಾರದ ಮೇಲೆ ತಾರತಮ್ಯ ಮಾಡದಿರುವುದು ಓಕೆ. ಆದರೆ, ಸಿನಿಮಾ ಮಂದಿರಗಳಲ್ಲಿ ಹೊರಗಿನಿಂದ ಯಾವುದೇ ಫುಡ್ ತರಬಹುದು ಎಂದು ಹೈಕೋರ್ಟ್ ಹೇಳಲು ಹೇಗೆ ಸಾಧ್ಯ ಎಂದು ಪೀಠ ಪ್ರಶ್ನಿಸಿತು.
ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ಅವರು ಹಾಸ್ಯಮಯವಾಗಿ ಪ್ರಶ್ನಿಸಿದ್ದು ಗಮನ ಸೆಳೆಯಿತು. ಯಾರಾದರೂ ಚಿತ್ರಮಂದಿರದೊಳಗೆ ಜಿಲೇಬಿ ತರಲು ಪ್ರಾರಂಭಿಸಿದರೆ ಅದನ್ನು ಥಿಯೇಟರ್ ಆಡಳಿತವು ತಡೆಯಲು ಮುಂದಾಗಬಹುದು. ಆಗ ವೀಕ್ಷಕರು ತಮ್ಮ ಬೆರಳಿಗೆ ಅಂಟಿಕೊಂಡಿರುವ ಜಿಲೇಬಿಯ ಜಿಗಟನ್ನು ಸೀಟಿಗೆ ಒರೆಸಿದರೆ ನಂತರ ಸ್ವಚ್ಛಗೊಳಿಸಲು ಯಾರು ಹಣ ನೀಡುತ್ತಾರೆ? ಜನರು ತಂದೂರಿ ಚಿಕನ್ ಸಹ ತರಬಹುದು! ಆಗ ಥಿಯೇಟರ್‌ನಲ್ಲಿ ಮೂಳೆಗಳು ಬಿದ್ದಿವೆ ಎಂಬ ದೂರುಗಳು ಬರಬಹುದು. ಹಾಗೆಯೇ ಯಾರೊಬ್ಬರಿಗೂ ಪಾಪ್‌ಕಾರ್ನ್ ಖರೀದಿಸಿ ಎಂದು ಒತ್ತಾಯಿಸುವುದಿಲ್ಲಎಂದು ಚಂದ್ರಚೂಡ್ ಅವರು ಹೇಳಿದರು.