ಮುಂಬೈ: 2013ರಲ್ಲಿ ಮುಂಬೈನ ಅಂದೇರಿಯಲ್ಲಿರುವ ಒಂದು ಮನೆಯಿಂದ 7 ವರ್ಷದ ಹುಡುಗಿಯೊಬ್ಬಳು ನಾಪತ್ತೆಯಾಗಿದ್ದಳು. ಈ ಹುಡುಗಿಯನ್ನು ಒಂದು ದಂಪತಿ ಅಪಹರಣ ಮಾಡಿದ್ದರು. ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಧೋನು ಭೋಸ್ಲೆ ಎಂಬುವರು ತನಿಖೆಯನ್ನೂ ಕೈಗೆತ್ತಿಕೊಂಡಿದ್ದರು. ಈ ಬಾಲಕಿಯ ಅಪಹರಣ ಕೇಸ್ ಸೇರಿ ಒಟ್ಟು 166 ಕಿಡ್ನ್ಯಾಪ್ ಪ್ರಕರಣಗಳು ರಾಜೇಂದ್ರ ಧೋನು ಮತ್ತು ಅವರ ತಂಡದ ಕೈಯಲ್ಲಿ ಇದ್ದವು ಮತ್ತು ಇದೇ ಅವರ 166ನೇ ಕೇಸ್ ಆಗಿತ್ತು. ಧೋನು ಭೋಸ್ಲೆ ನಿವೃತ್ತರಾಗುವ ಹೊತ್ತಿಗೆ ಉಳಿದ 165 ಕೇಸ್ಗಳನ್ನು ಭೇದಿಸಿ, ಅಪಹೃತ ಮಕ್ಕಳನ್ನು ಪತ್ತೆಹಚ್ಚಿದ್ದರು. ಆದರೆ ಇವಳು ಮಾತ್ರ ಸಿಕ್ಕಿರಲೇ ಇಲ್ಲ. ಧೋನು ಭೋಸ್ಲೆ ತಾವು ನಿವೃತ್ತರಾದ ಮೇಲೆ ಕೂಡ ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿ, ಹುಡುಗಿಯನ್ನು ಹುಡುಕುತ್ತಲೇ ಇದ್ದರು.
ಆದರೆ ಈಗ ಅಚ್ಚರಿಯೆಂಬಂತೆ, 9 ವರ್ಷಗಳ ನಂತರ ಹುಡುಗಿ ಸಿಕ್ಕಿದ್ದಾಳೆ. ಆಕೆ ತನ್ನ ಕುಟುಂಬದ ಜತೆಯಾಗಿದ್ದಾಳೆ. ತನ್ನಮ್ಮನ ಮಡಿಲು ಸೇರಿಕೊಂಡಿದ್ದಾಳೆ. ಹ್ಯಾರಿ ಜೋಸೆಫ್ ಡಿ ಸೋಜಾ ಮತ್ತು ಆತನ ಪತ್ನಿ ಸೋನಿ ಎಂಬ ಮಕ್ಕಳಿಲ್ಲದ ದಂಪತಿ 2013ರಲ್ಲಿ ಇವಳನ್ನು ಕಿಡ್ನ್ಯಾಪ್ ಮಾಡಿದ್ದರು ಎಂಬ ಸತ್ಯ ಬೆಳಕಿಗೆ ಬಂದಿದ್ದು, ಈಗ ಅವರಿಬ್ಬರೂ ಬಂಧಿತರಾಗಿದ್ದಾರೆ. ಹುಡುಗಿಗೆ ಈಗ 16 ವರ್ಷ, ಅಂಧೇರಿಯಲ್ಲಿರುವ ಆಕೆಯ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಸಿಕ್ಕಿದ್ದಾಳೆ.
2013ರಲ್ಲಿ ಏನಾಗಿತ್ತು?
ಅಂದು ಹುಡುಗಿ ನಾಪತ್ತೆಯಾದ ದಿನ ಆಕೆ ತನ್ನ ಅಣ್ಣನೊಂದಿಗೆ ಜಗಳವಾಡುತ್ತ ಶಾಲೆಗೆ ಹೋಗುತ್ತಿದ್ದಳು. ಅಪ್ಪ ಕೊಟ್ಟ ಪಾಕೆಟ್ ಮನಿ ಬಗ್ಗೆ ಇವರಿಬ್ಬರ ನಡುವೆ ಕಲಹ ಉಂಟಾಗಿತ್ತು. ಹಾಗೇ, ಶಾಲೆಯ ಬಳಿ ಹೋದರೂ ಹುಡುಗಿ ಶಾಲೆಯೊಳಕ್ಕೆ ಹೋಗದೇ ಹೊರಗೇ ಅಡ್ಡಾಡುತ್ತಿದ್ದಳು. ಆಗ ಅಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ಹ್ಯಾರಿ ಜೋಸೆಫ್ ಡಿ ಸೋಜಾ ಮತ್ತು ಸೋನಿ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ್ದರು. ಮಕ್ಕಳಿಲ್ಲದ ನಮಗೆ ದೇವರು ಕೊಟ್ಟ ಮಗುವೆಂದು ಭಾವಿಸಿ ಕರೆದುಕೊಂಡು ಹೋಗಿದ್ದೆವು ಎಂದು ಜೋಸೆಫ್ ಹೇಳಿಕೊಂಡಿದ್ದಾರೆ.
ಇತ್ತ ಬಾಲಕಿ ಎಷ್ಟು ಹೊತ್ತಾದರೂ ಶಾಲೆಯಿಂದ ಬಾರದೆ ಇದ್ದಾಗ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಪೊಲೀಸರು ಇವಳನ್ನು ಹುಡುಕುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ ಹ್ಯಾರಿ ಮತ್ತು ಸೋನಿ ಫುಲ್ ಅಲರ್ಟ್ ಆದರು. ಹುಡುಗಿ ನಾಪತ್ತೆಯಾಗಿದ್ದಾಳೆ ಎಂಬ ದೊಡ್ಡದೊಡ್ಡ ಪೋಸ್ಟರ್ಗಳು ಈ ದಂಪತಿ ಕಣ್ಣಿಗೂ ಬಿದ್ದವು. ಹೀಗಾಗಿ ತಮ್ಮ ಊರಾದ ಕರ್ನಾಟಕದ ರಾಯಚೂರಿನ ಹಾಸ್ಟೆಲ್ವೊಂದರಲ್ಲಿ ಬಾಲಕಿಯನ್ನು ಇಟ್ಟರು. 2016ರಲ್ಲಿ ಜೋಸೆಫ್ ಮತ್ತು ಸೋನಿಗೆ ಅವರದ್ದೇ ಮಗು ಹುಟ್ಟಿದೆ. ಅದಾದ ಮೇಲೆ ಈ ಹುಡುಗಿಯನ್ನೂ ರಾಯಚೂರಿನಿಂದ ಅವರು ಮುಂಬೈಗೆ ಕರೆದುಕೊಂಡು ಬಂದರು. ಆದರೆ ಇಬ್ಬರ ಮಕ್ಕಳ ಖರ್ಚು-ವೆಚ್ಚ ನಿಭಾಯಿಸಲು ಸಾಧ್ಯವಾಗದೆ ಇದ್ದಾಗ, ಈಕೆಯನ್ನು ಬೇಬಿಸಿಟ್ಟರ್ನಲ್ಲಿ ಕೆಲಸ ಮಾಡಲು ಬಿಟ್ಟಿದ್ದರು. ಅಂತಿಮವಾಗಿ ಅವಳನ್ನು ಕರೆದುಕೊಂಡು ಬಂದು ಮನೆಯ ಸಮೀಪ ಬಿಟ್ಟಿದ್ದರು ಎಂದು ಡಿ.ಎನ್.ನಗರ ಠಾಣೆ ಹಿರಿಯ ಅಧಿಕಾರಿ ಮಿಲಿಂದ್ ಕುರ್ದೆ ತಿಳಿಸಿದ್ದಾರೆ. ಹಾಗೇ, ಇದು ನಿಜಕ್ಕೂ ನಮಗೇ ಅಚ್ಚರಿ ತಂದ ಪ್ರಕರಣ ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ. ಈ ಹುಡುಗಿಯ ಅಪಹರಣ ಕೇಸ್ ಗಂಭೀರವಾಗಿ ಪರಿಗಣಿಸಿದ್ದ ನಿವೃತ್ತ ಅಧಿಕಾರಿ ಭೋಸ್ಲೆಯವರೂ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫೇಸ್‌ಬುಕ್‌ನಿಂದ ಮನೆಗೆಲಸಕ್ಕೆ ನೇಮಿಸಿಕೊಳ್ಳುವವರೇ ಎಚ್ಚರ! ಬೆಂಗಳೂರಲ್ಲಿ ಮುಂಬೈ ಕಳ್ಳಿಯರ ಸೆರೆ