Site icon Vistara News

Vani Jayaram Passes Away: ಕನ್ನಡದಲ್ಲಿ 600 ಸೇರಿ 10 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದ ವಾಣಿ ಜಯರಾಮ್‌

Vani Jayaram Passes Away

#image_title

ಚೆನ್ನೈ: ಕನ್ನಡ, ತಮಿಳು, ಹಿಂದಿ ಸೇರಿ ೧೦ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ವಾಣಿ ಜಯರಾಮ್‌ (Vani Jayaram Passes Away) ಅವರು ನಿಧನರಾಗಿದ್ದು, ಅವರ ಅಗಲಿಕೆಗೆ ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ಕನ್ನಡದಲ್ಲಿ ೬೦೦ಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದ ಅವರು, ಕರ್ನಾಟಕದ ಮನೆ ಮಾತಾಗಿದ್ದರು. ವಾಣಿ ಜಯರಾಮ್‌ ಅವರು ಕನ್ನಡದಲ್ಲಿ ಹಾಡಿದ ಪ್ರಮುಖ ಹಾಡುಗಳು ಯಾವವು? ಇವರ ಬಾಲ್ಯ, ಹಿನ್ನೆಲೆ ಏನು? ಯಾವ ಯಾವ ಭಾಷೆಗಳಲ್ಲಿ ಕೋಗಿಲೆಯಂತಹ ಕಂಠದ ಮೂಲಕ ಛಾಪು ಮೂಡಿಸಿದ್ದರು ಸೇರಿ ವಿವಿಧ ಮಾಹಿತಿ ಇಲ್ಲಿದೆ.

ಬಾಲ್ಯದಲ್ಲಿಯೇ ಸಂಗೀತಾಸಕ್ತಿ

ತಮಿಳುನಾಡಿನ ವೆಲ್ಲೂರು ಜಿಲ್ಲೆ ಇಡಂಗು ಗ್ರಾಮದಲ್ಲಿ ೧೯೪೫ರ ನವೆಂಬರ್‌ ೩೦ರಂದು ಜನಿಸಿದರು. ಇವರ ತಾಯಿಯವರೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಕಾರಣ ವಾಣಿ ಜಯರಾಮ್‌ ಅವರು ಕೂಡ ಸಹಜವಾಗಿ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದರು. ವಾಣಿ ಅವರು ತಮ್ಮ ೫ನೇ ವಯಸ್ಸಿನಲ್ಲಿಯೇ ಕಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತದ ಅಭ್ಯಾಸ ಆರಂಭಿಸಿದರು. ಏಳನೇ ವಯಸ್ಸಿಗೆ ಸರಾಗವಾಗಿ ಹಾಡುವುದನ್ನು ರೂಢಿಸಿಕೊಂಡ ಇವರು ೧೦ನೇ ವಯಸ್ಸಿಗೆ ತಿರುವನಂತಪುರದಲ್ಲಿ ಸತತ ೩ ಗಂಟೆ ಸಂಗೀತ ಕಛೇರಿ ನಡೆಸಿ ಅಚ್ಚರಿ ಮೂಡಿಸಿದ್ದರು.

ಪತ್ನಿಯ ಆಸಕ್ತಿಗೆ ನೀರೆರೆದ ಪತಿ

ಓದಿನಲ್ಲೂ ಮುಂದಿದ್ದ ವಾಣಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ, ಇವರು ಇಂಡೋ-ಬೆಲ್ಜಿಯಂ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಮ್‌ ಅವರನ್ನು ವರಿಸಿದರು. ಜಯರಾಮ್‌ ಅವರನ್ನು ಮದುವೆಯಾದ ಬಳಿಕ ವಾಣಿ ಅವರ ಜೀವನಕ್ಕೆ ತಿರುವು ಸಿಕ್ಕಿತು. ಮದುವೆ ಬಳಿಕ ವಾಣಿ ಅವರು ಮುಂಬೈನಲ್ಲಿಯೇ ನೆಲೆಸಿದರು. ಪತಿ ಕೂಡ ಸಿತಾರ್‌ ವಾದಕರಾದ ಕಾರಣ ವಾಣಿ ಅವರ ‘ವಾಣಿ’ಯು ಜಗಜ್ಜಾಹೀರಾಗಲು ಕಾರಣವಾಯಿತು. ಪತ್ನಿಯ ಆಸಕ್ತಿಗೆ ಪತಿ ನೀರೆರೆದರು. ಹಿಂದೂಸ್ತಾನಿ ಸಂಗೀತ ಕಲಿತ ಇವರು ಸಂಗೀತವನ್ನೇ ವೃತ್ತಿಯಾಗಿಸಿಕೊಂಡರು.

ಎರಡನೇ ಗೀತೆಯಿಂದಲೇ ಜನಪ್ರಿಯತೆ

ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿ ಅವರ ಮೂಲಕ ವಾಣಿ ಜಯರಾಮ್‌ ಅವರು ಚಲನಚಿತ್ರ ರಂಗ ಪ್ರವೇಶಿಸಿದರು. ದೇಸಾಯಿ ಅವರು ಅಮ್ಮ ತಾಯಿ ಗೋಡೆ ಚಿತ್ರದಲ್ಲಿ ವಾಣಿ ಜಯರಾಮ್‌ ಅವರಿಂದ ಹಾಡಿಸಿದರು. ಈ ಹಾಡನ್ನು ಮೆಚ್ಚಿದ ಹಿಂದಿ ಸಿನಿಮಾ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ ಅವರು ತಮ್ಮ ಗುಡ್ಡಿ ಚಿತ್ರಕ್ಕೆ ಮೂರು ಹಾಡು ಹಾಡಿಸಿದರು. ಅದರಲ್ಲೂ, ಬೋಲೆರೆ ಪಪಿಹರಾ ಹಾಡು ದೇಶಾದ್ಯಂತ ಗಮನ ಸೆಳೆಯಿತು. ಆ ಮೂಲಕ ವಾಣಿ ಜಯರಾಮ್‌ ಎಂಬ ಹೆಸರು ಜನಜನಿತವಾಯಿತು. ಇಲ್ಲಿಂದ ಹಿಂತಿರುಗಿ ನೋಡದ ವಾಣಿ ಜಯರಾಮ್‌ ಅವರು ಹಿಂದಿಯಲ್ಲಿ ಆಶಾ ಭೋಂಸ್ಲೆ, ಮೊಹಮ್ಮದ್‌ ರಫಿ, ಆರ್‌.ಡಿ.ಬರ್ಮನ್‌ ಸೇರಿ ಹಲವು ಗಾಯಕರ ಜತೆ ಹಾಡುವ ಅವಕಾಶ ದೊರೆಯಿತು.

ಕನ್ನಡದಲ್ಲಿ 600ಕ್ಕೂ ಅಧಿಕ ಗೀತೆಗಳ ಗಾಯನ

೧೯೭೩ರಲ್ಲಿ ಕನ್ನಡ ಚಿತ್ರರಂಗವನ್ನೂ ಪ್ರವೇಶಿಸಿದ ವಾಣಿ ಜಯರಾಮ್‌, ನಾಡಿನ ಮನೆಮಾತಾದರು. ಕೌಬಾಯ್‌ ಕುಳ್ಳ ಚಿತ್ರದ ಮಾಗಿಯ ಚಳಿಯಲಿ ಹಾಡಿನ ಮೂಲಕ ಅವರು ಕನ್ನಡದಲ್ಲೂ ಹಾಡಲು ಆರಂಭಿಸಿದರು. ಮಾನಸ ಸರೋವರ ಚಿತ್ರದ ‘ಮಾನಸ ಸರೋವರ, ಈ ನಿನ್ನ ಮನಸೇ ಮಾನಸ ಸರೋವರ’, ಎರಡು ಕನಸು ಸಿನಿಮಾದ ‘ಎಂದೆಂದು ನಿನ್ನನು ಮರೆತು’, ಬಯಲು ದಾರಿ ಚಿತ್ರದ ‘ಕನಸಲೂ ನೀನೆ, ಮನಸಲೂ ನೀನೆ’, ಬೆಸುಗೆ ಸಿನಿಮಾದ ‘ವಸಂತ ಬರೆದನು ಒಲವಿನ ಓಲೆ’ ಸೇರಿ ಹಲವು ಹಾಡುಗಳು ಜನಪ್ರಿಯವಾಗಿವೆ. ಇವರು ಕನ್ನಡಿಗರೇ ಎಂಬಷ್ಟರ ಮಟ್ಟಿಗೆ ಕನ್ನಡದ ಜನ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ.

ಅರಸಿ ಬಂದ ಪ್ರಶಸ್ತಿ-ಪುರಸ್ಕಾರಗಳು

ವಾಣಿ ಜಯರಾಮ್‌ ಅವರ ಕಂಠಸಿರಿಯು ದೇಶಾದ್ಯಂತ ಮನೆ-ಮನ ತಲುಪಿದೆ. ೧೪ ಭಾಷೆಗಳಲ್ಲಿ ಸುಮಧುರವಾಗಿ ಹಾಡುವ ಮೂಲಕ ಛಾಪು ಮೂಡಿಸಿದ ಅವರಿಗೆ ಹತ್ತಾರು ಪ್ರಶಸ್ತಿ-ಪುರಸ್ಕಾರಗಳು ಲಭವಿಸಿವೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ, ೨೭ ಬಾರಿ ಶ್ರೇಷ್ಠ ಗಾಯಕಿ ಪ್ರಶಸ್ತಿ ದೊರೆತಿದೆ. ಅಷ್ಟೇ ಏಕೆ, ೨೦೨೩ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯೂ ಅವರಿಗೆ ಘೋಷಿಸಲಾಗಿತ್ತು. ಆದರೆ, ಅದನ್ನು ಸ್ವೀಕರಿಸುವ ಮೊದಲೇ ವಾಣಿ ಜಯರಾಮ್‌ ಅವರು ಅಗಲಿದ್ದು ಸಂಗೀತ ಪ್ರೇಮಿಗಳ ಮನಸ್ಸನ್ನು ಘಾಸಿಗೊಳಿಸಿದೆ.

ಇದನ್ನೂ ಓದಿ: Vani Jayaram passes away: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ​ ನಿಧನ

Exit mobile version