ಮದುವೆ ದಿನ ವರನೋ/ವಧುವೋ ನಾಪತ್ತೆಯಾಗುವುದು, ಯಾವುದೋ ಕಾರಣ ಹೇಳಿ ಮದುವೆ ನಿರಾಕರಿಸುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಮದುವೆ ದಿನ ವರ ಬಾರದೆ ಇದ್ದರೆ ವಧುವಿನ ಕಡೆಯವರು ಪೊಲೀಸ್ ಕಂಪ್ಲೇಂಟ್ ಕೊಡುವುದು, ವಧು ನಾಪತ್ತೆಯಾದರೆ ವರನ ಕಡೆಯವರು ಜಗಳವಾಡಿ ಠಾಣೆ ಮೆಟ್ಟಿಲೇರುವ, ಮದುವೆ ಮುರಿದುಕೊಳ್ಳುವ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಆದರೆ ರಾಜಸ್ಥಾನದ ಸೈನಾ (Rajasthan News) ಎಂಬ ಗ್ರಾಮದಲ್ಲಿ ತುಸು ವಿಭಿನ್ನ ಘಟನೆ ನಡೆದಿದೆ. ಮದುವೆ ದಿನ ವಧು ಓಡಿ ಹೋಗಿ (Bride Eloped), ವರ ಆಕೆಗಾಗಿ ಅಲ್ಲೇ 13 ದಿನ ಕಾದುಕುಳಿತಿದ್ದಲ್ಲದೆ, ಬಳಿಕ ಆಕೆಯನ್ನೇ ಮದುವೆಯಾಗಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ..!
ಅಂದು ವರ ಮತ್ತು ಆತನ ಕಡೆಯವರು ವಧುವಿನ ಮನೆಗೆ ಮೆರವಣಿಗೆ ಬಂದಾಗಿತ್ತು. ಮದುವೆ ಕಾರ್ಯಕ್ರಮಗಳು ಶುರುವಾಗಿದ್ದವು. ಆದರೆ ಇನ್ನೇನು ತಾಳಿ ಕಟ್ಟುವುದು, ಸಪ್ತಪದಿ ತುಳಿಯುವುದು ಬಾಕಿ ಇತ್ತು. ವಧು ಮನೀಶಾ ಆಗ ನಾಟಕ ಶುರು ಮಾಡಿದ್ದಳು. ನನಗೆ ಹೊಟ್ಟೆ ನೋವು, ವಾಕರಿಕೆ ಎಂದು ಹೇಳಿ ಅಲ್ಲಿಂದ ಎದ್ದು ಹೋದವಳು, ಮನೆ ಹಿಂಭಾಗದ ನೀರಿನ ಟ್ಯಾಂಕ್ ಬಳಿ ಹೋಗಿದ್ದಳು. ಮತ್ತೆ ವಾಪಸ್ ಬಂದಿರಲಿಲ್ಲ. ಎಷ್ಟು ಹೊತ್ತಾದರೂ ಆಕೆ ಬಾರದಾಗ ಮನೆಯವರೆಲ್ಲ ಸೇರಿ ಹುಡುಕಾಟ ನಡೆಸದರು. ಆದರೆ ಅಷ್ಟರಲ್ಲಿ ಅವಳು ತನ್ನ ಲವ್ವರ್ ಜತೆ ಓಡಿ ಹೋಗಿದ್ದಳು.
ಆಕೆ ಪಾಲಕರಿಗೆ ತಮ್ಮ ಮಗಳು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದು ಗೊತ್ತಿತ್ತು. ಹೀಗಾಗಿ ಅವರಿಗೆ ಮಗಳ ಕೆಲಸ ಅರ್ಥವಾಯಿತು. ಅದನ್ನು ಅವರು ವರ ಮತ್ತು ಆತನ ಕುಟುಂಬದವರಿಗೆ ತಿಳಿಸಿದರು. ಆದರೆ ವರ ಇಲ್ಲೊಂದು ಟ್ವಿಸ್ಟ್ ಕೊಟ್ಟ. ತಾನು ಯಾವ ಕಾರಣಕ್ಕೂ ಹಸೆಮಣೆ ಬಿಟ್ಟು ಏಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತ. ಕಟ್ಟಿದ ಬಾಸಿಂಗವನ್ನೂ ತೆಗೆಯಲು ಒಪ್ಪಲಿಲ್ಲ. 13 ದಿನಗಳವರೆಗೆ ಹೀಗೆ ವಧುವಿನ ಮನೆಯಲ್ಲೇ ಬೀಡುಬಿಟ್ಟಿದ್ದ. ಇನ್ನು ವಧು ನಾಪತ್ತೆಯಾದ ಬೆನ್ನಲ್ಲೇ ಮನೆಯವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಹೀಗಾಗಿ ಆಕೆಗಾಗಿ ಹುಡುಕಾಟವೂ ನಡೆದಿತ್ತು. ಅಂತಿಮವಾಗಿ 13ದಿನಗಳ ಬಳಿಕ ಮನಿಷಾಳರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆ ವಾಪಸ್ ಮನೆಗೆ ಬರುತ್ತಿದ್ದಂತೆ ಆ ವರ ಅವಳನ್ನೇ ಮದುವೆಯಾಗಿದ್ದಾನೆ. ಸಂಪ್ರದಾಯಬದ್ಧವಾಗಿ, ಸಂಭ್ರಮದಿಂದ ವಿವಾಹ ಸಮಾರಂಭ ನೆರವೇರಿದೆ.