ನಾಗ್ಪುರ, ಮಹಾರಾಷ್ಟ್ರ: ಓಪನ್ ಕೋರ್ಟ್ನಲ್ಲಿ ಬಾಂಬೆ ಹೈಕೋರ್ಟ್ (Bombay High Court) ನ್ಯಾಯಮೂರ್ತಿಯೊಬ್ಬರು (Judge) ರಾಜೀನಾಮೆ ನಿರ್ಧಾರವನ್ನು (Resignation) ಪ್ರಕಟಿಸಿದರು. ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ (Nagpur Bench) ಕಾರ್ಯನಿರ್ವಹಿಸುತ್ತಿರುವ ಜಸ್ಟೀಸ್ ರೋಹಿತ್ ದೇವ್ (Justice Rohit Deo) ಅವರು ಕೋರ್ಟ್ ನಡೆಯುತ್ತಿದ್ದಾಗಲೇ(Open Court), ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು. ಸ್ವಾಭಿಮಾನ ಬಿಟ್ಟು ಕೆಲಸ ಮಾಡಲಾರೆ ಎಂದು ನ್ಯಾಯಮೂರ್ತಿಗಳು ಹೇಳಿದರೆಂದು, ಕೋರ್ಟ್ನಲ್ಲಿ ಹಾಜರಿದ್ದ ವಕೀಲರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
“ನ್ಯಾಯಾಲಯದಲ್ಲಿ ಹಾಜರಿರುವ ನಿಮ್ಮಲ್ಲಿ ಪ್ರತಿಯೊಬ್ಬರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನಿಮ್ಮನ್ನು ಹಲವು ಬಾರಿ ಗದರಿಸಿದ್ದೇನೆ. ಏಕೆಂದರೆ, ನೀವು ಸುಧಾರಿಸಲಿ ಎಂದು ಹಾಗೆ ಮಾಡಿದ್ದೇನೆ. ನಾನು ನಿಮ್ಮಲ್ಲಿ ಯಾರನ್ನೂ ನೋಯಿಸಲು ಬಯಸುವುದಿಲ್ಲ. ಏಕೆಂದರೆ ನೀವೆಲ್ಲರೂ ನನಗೆ ಕುಟುಂಬದವರಂತೆ ಮತ್ತು ಕ್ಷಮಿಸಿ. ನಾನು ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ಆತ್ಮಗೌರವಕ್ಕೆ ವಿರುದ್ಧವಾಗಿ ನಾನು ಕೆಲಸ ಮಾಡಲಾರೆ, ನೀವು ಕಷ್ಟಪಟ್ಟು ಕೆಲಸ ಮಾಡಿ ಎಂದು ನ್ಯಾಯಮೂರ್ತಿ ರೋಹಿತ್ ದೇವ್ ಹೇಳಿದರೆಂದು ವಕೀಲರು ತಿಳಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ರೋಹಿತ್ ದೇವ್ ಅವರು, ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ. ಈಗಾಗಲೇ ರಾಜೀನಾಮೆ ಪತ್ರವನ್ನು ನಾನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದೇನೆ ಎಂದು ತಿಳಿಸಿದರು.
2022 ರಲ್ಲಿ ನ್ಯಾಯಮೂರ್ತಿ ಡಿಯೋ ಅವರು ಮಾವೋವಾದಿ ಸಂಪರ್ಕಗಳ ಆರೋಪದ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದರು. ಅವರಿಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಅಮಾನತ್ತು ಮಾಡಿದ್ದರು. ಕಳೆದ ವಾರ ಜನವರಿ 3ರ ಮಹಾರಾಷ್ಟ್ರ ಸರ್ಕಾರದ ನಿರ್ಣಯದ (ಆದೇಶ) ಕಾರ್ಯಾಚರಣೆಯನ್ನು ತಡೆಹಿಡಿದಿದ್ದರು.
ಈ ಸುದ್ದಿಯನ್ನೂ ಓದಿ: Prithvi Shaw: ಕ್ರಿಕೆಟಿಗ ಪೃಥ್ವಿ ಶಾಗೆ ನೋಟಿಸ್ ನೀಡಿದ ಬಾಂಬೆ ಹೈಕೋರ್ಟ್
ಜಸ್ಟೀಸ್ ದೇವ್ ಅವರನ್ನು 2017ರ ಜೂನ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಅವರ ಅಧಿಕಾರವಧಿ 2025ರ ಡಿಸೆಂಬರ್ನಲ್ಲಿ ಕೊನೆಯಾಗಲಿತ್ತು. ನ್ಯಾಯಮೂರ್ತಿಯಾಗಿ ನೇಮಕವಾಗುವ ಮೊದಲು ಅವರು, 2016ರಲ್ಲಿ ಮಹಾರಾಷ್ಟ್ರದ ಅಡ್ವೋಕೇಟ್ ಜನರಲ್ ಆಗಿ ಕೆಲಸ ಮಾಡುತ್ತಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.