ನವ ದೆಹಲಿ: ಯುವತಿಯೊಬ್ಬಳು ಮನುಸ್ಮೃತಿ ಪುಸ್ತಕಕ್ಕೆ ಬೆಂಕಿ ಹೊತ್ತಿಸಿ, ಅದರಿಂದ ಸಿಗರೇಟ್ ಹಚ್ಚಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಈ ಯುವತಿ ಹೆಸರು ಪ್ರಿಯಾ ದಾಸ್ ಎಂದಾಗಿದ್ದು, ಈಕೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂದು ಹೇಳಲಾಗಿದೆ.
ಪ್ರಿಯಾದಾಸ್ ಒಂದು ಕಲ್ಲಿನ ಮೇಲೆ ಕುಳಿತಿದ್ದಾರೆ. ಅವರ ಎದುರು ಒಂದು ಮಣ್ಣಿನ ಒಲೆಯಿದ್ದು, ಅದರ ಮೇಲೆ ಪಾತ್ರೆಯಿಟ್ಟು ಅವರು ಚಿಕನ್ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಲೇ ಅವರು ಮನುಸ್ಮೃತಿ ಪುಸ್ತಕವನ್ನು ಉರಿಯುವ ಬೆಂಕಿಗೆ ಹಿಡಿದಿದ್ದಾರೆ. ಬಳಿಕ ಉರಿಯುತ್ತಿರುವ ಪುಸ್ತಕದಲ್ಲಿ ಸಿಗರೇಟ್ ಹಂಚಿಕೊಂಡಿದ್ದಾಳೆ. ಮನುಸ್ಮೃತಿಯನ್ನು ಯಾಕೆ ಸುಟ್ಟು ಹಾಕಿದೆ ಎಂಬ ಬಗ್ಗೆ ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದ ಪ್ರಿಯಾದಾಸ್ ‘ಮಹಿಳೆಯರು ಮದ್ಯ ಸೇವನೆ ಮಾಡಿದರೆ, ಆಕೆಯನ್ನು ವಿಧವಿಧವಾಗಿ ಶಿಕ್ಷಿಸಬೇಕು. ಹೀಗೆ ಶಿಕ್ಷಿಸುವ ಮುನ್ನ ಆಕೆಯ ಜಾತಿ ಯಾವುದೆಂದು ಕೇಳಿಕೊಳ್ಳಬೇಕು’ ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇದು ನನ್ನಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿತು. ನಾನು ಸಿಗರೇಟ್ ಸೇದುವವಳೂ ಅಲ್ಲ, ಮಾಂಸಾಹಾರ ತಿನ್ನುವವಳೂ ಅಲ್ಲ. ಪುಸ್ತಕದ ವಿರುದ್ಧ ನನ್ನ ಪ್ರತಿಭಟನೆಯನ್ನು ಹೊರಹಾಕುವುದಕ್ಕೋಸ್ಕರವಷ್ಟೇ ನಾನು ಹೀಗೆ ಚಿಕನ್ ಮಾಡುತ್ತ, ಪುಸ್ತಕವನ್ನು ಸುಟ್ಟು, ಅದರಲ್ಲಿ ಬೆಂಕಿ ಹಚ್ಚಿದೆ’ ಎಂದು ಹೇಳಿದ್ದಾರೆ.
ದಲಿತ ಹಕ್ಕುಗಳ ಹೋರಾಟಗಾರ್ತಿಯೂ ಆಗಿರುವ ಪ್ರಿಯಾ ದಾಸ್ ‘ಮನುಸ್ಮೃತಿಯ ದಹನಕ್ಕೆ ಹಲವು ವರ್ಷಗಳ ಹಿಂದೆಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಡಿಪಾಯ ಹಾಕಿದ್ದರು. ಮನುಸ್ಮೃತಿ ಸುಟ್ಟುಹಾಕಿದ್ದು ಯಾವುದೇ ವ್ಯಕ್ತಿಯ ವಿರುದ್ಧದ ಆಕ್ರೋಶಕ್ಕೆ ಅಲ್ಲ. ಇದರಲ್ಲಿರು ಕಪಟ ಆಚಾರ ಮತ್ತು ತೋರಿಕೆಯ ವಿಚಾರಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಪುಸ್ತಕದಲ್ಲಿ ಮಹಿಳೆಯರು ಮತ್ತು ಮನುಕುಲದ ಬಗ್ಗೆ ಬರೆಯಲಾದ ಎಷ್ಟೋ ವಿಷಯಗಳು ಅನುಚಿತವಾಗಿವೆ. ಪ್ರತಿ ಪುಟವನ್ನೂ ಸುಡಬೇಕು ಎನ್ನಿಸುತ್ತದೆ. ಇದಕ್ಕಾಗಿ ಪ್ರತಿಯೊಬ್ಬ ದಲಿತರೂ ಮುಂದಾಗಬೇಕು’ ಎಂದು ಪ್ರಿಯಾ ದಾಸ್ ಕರೆಕೊಟ್ಟಿದ್ದಾರೆ.