ನವ ದೆಹಲಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ಶಿಕ್ಷಾರ್ಹ ಅಪರಾಧ. ಅಂಥವರಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ನೀಡಬಹುದು, ದಂಡ ವಿಧಿಸಬಹುದು. ಅಥವಾ ಇದೆರಡೂ ಶಿಕ್ಷೆಯನ್ನು ಕೊಡಬಹುದು. ಆದರೂ ಕೆಲವರು ಬೇಕೆಂದೇ ರಾಷ್ಟ್ರಧ್ವಜಕ್ಕೆ ಅವಮಾನಿಸುತ್ತಾರೆ..ಇನ್ನೂ ಕೆಲವರು ತಿಳಿವಳಿಕೆಯ ಕೊರತೆಯಿಂದ ಅಪಮಾನಿಸಿಬಿಡುತ್ತಾರೆ. ಮತ್ತೊಂದಷ್ಟು ಮಂದಿ ಗೊತ್ತಿದ್ದರೂ, ತಪ್ಪು ಮಾಡಬೇಕು ಎಂಬ ಭಾವನೆ ಇಲ್ಲದಿದ್ದರೂ, ಆ ಕ್ಷಣ ಎಚ್ಚರ ತಪ್ಪಿ ಎಡವಟ್ಟು ಮಾಡಿಕೊಂಡು ಬಿಡುತ್ತಾರೆ.
ಈಗ ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ ಹವೇಲಿಯ ಸಿಲ್ವಸ್ಸಾದಲ್ಲಿ ವ್ಯಕ್ತಿಯೊಬ್ಬ ಚಿಕನ್ನ್ನು ತ್ರಿವರ್ಣ ಧ್ವಜದಿಂದ ಸ್ವಚ್ಛಗೊಳಿಸಿ ಅರೆಸ್ಟ್ ಆಗಿದ್ದಾನೆ. ಕೋಳಿ ಅಂಗಡಿಯಲ್ಲಿ ಇದ್ದ ವ್ಯಕ್ತಿಯೊಬ್ಬ ರಾಷ್ಟ್ರಧ್ವಜದಲ್ಲಿ ಚಿಕನ್ ಕ್ಲೀನ್ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಮೋಹಿತ್ ಬಾಬು ಎಂಬುವರು ವಿಡಿಯೊ ಶೇರ್ ಮಾಡಿ, ‘ಈ ವ್ಯಕ್ತಿಯ ಹೆಸರು ಮೊಹಮ್ಮದ್ ಸೈಫ್ ನದೀಮ್ ಖುರೇಷಿ. ಈತ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವವನು. ಕತ್ತರಿಸಿದ ಕೋಳಿಯನ್ನು ಬಟ್ಟೆಯಲ್ಲಿ ಸ್ವಚ್ಛ ಮಾಡುವ ಬದಲು, ಒಂದು ಚಿಕ್ಕ ರಾಷ್ಟ್ರಧ್ವಜದಲ್ಲಿ ಕ್ಲೀನ್ ಮಾಡಿದ್ದಾನೆ. ಪ್ರಶ್ನೆ ಮಾಡಿದ್ದಕ್ಕೆ ‘ನೀವು ನನ್ನ ದೇಶಭಕ್ತಿಯನ್ನು ಪ್ರಶ್ನಿಸಬೇಡಿ’ ಎಂದು ಉಡಾಫೆ ಉತ್ತರ ಕೊಟ್ಟಿದ್ದಾನೆ’ ಎಂದು ಅವರು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮೊಹಮ್ಮದ್ ಸೈಫ್ ನದೀಮ್ ಖುರೇಷಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿ ‘ಆರೋಪಿಯನ್ನು ಅರೆಸ್ಟ್ ಮಾಡಿ, ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದೇವೆ ಎಂದಿದ್ದಾರೆ.
ಅಂಗಡಿಯಲ್ಲಿ ಖುರೇಷಿ ಹೀಗೆ ಕತ್ತರಿಸಿದ ಕೋಳಿಯನ್ನು ರಾಷ್ಟ್ರಧ್ವಜದಲ್ಲಿ ಸ್ವಚ್ಛಗೊಳಿಸುತ್ತಿದ್ದುದನ್ನು ದಾರಿಹೋಕನೊಬ್ಬ ನೋಡಿ, ವಿಡಿಯೊ ಮಾಡಿದ್ದ. ತನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ ಮಾಡಿದ್ದ. ಪೊಲೀಸರ ಗಮನ ಸೆಳೆದಿದ್ದ. ಈ ಅಂಗಡಿ ಬವಿಸಾ ಫಲಿಯಾ ಎಂಬಲ್ಲಿ ಇದ್ದು, ವಿಡಿಯೊವನ್ನು ಗಮನಿಸಿದ ಪೊಲೀಸರು ಅಲ್ಲಿಗೆ ತೆರಳಿದ್ದರು. ಶುಕ್ರವಾರ ಈತನನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಖುರೇಷಿ ಸದ್ಯ ಜೈಲುಪಾಲಾಗಿದ್ದಾನೆ. ಆ ಕೋಳಿ ಮಾಂಸದ ಅಂಗಡಿಯನ್ನು ಸ್ಥಳೀಯ ಆಡಳಿತ ಸೀಲ್ ಮಾಡಿದೆ.
ಇದನ್ನೂ ಓದಿ: Rahul Gandhi: ಲಾಲ್ ಚೌಕ್‌ನಲ್ಲಿ ಧ್ವಜಾರೋಹಣ ವೇಳೆ ರಾಷ್ಟ್ರಧ್ವಜಕ್ಕಿಂತ ರಾಹುಲ್ ಗಾಂಧಿ ಕಟೌಟ್ ಎತ್ತರ, ಟೀಕಿಸಿದ ಜನ