ನವ ದೆಹಲಿ: ವಿಮಾನದಲ್ಲಿ ವಿಲಕ್ಷಣ ವರ್ತನೆ ಮಾಡುವ ಪ್ರಯಾಣಿಕರು ಕಾಣ ಸಿಗುವುದು ಅಪರೂಪವೇನೂ ಅಲ್ಲ. ಆದರೆ ಈ ಪ್ರಯಾಣಿಕ ಅತಿರೇಕ ಮತ್ತು ಅಸಹ್ಯ ಎನ್ನಿಸುವಂತೆ ನಡೆದುಕೊಂಡಿದ್ದಾನೆ. ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುತ್ತಿದ್ದ ಈತ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಘಟನೆ ನಡೆದಿದ್ದು ನವೆಂಬರ್ 26ರಂದು. ಆದರೆ ಅದು ಬಹಿರಂಗವಾಗಿರಲಿಲ್ಲ. ಇತ್ತೀಚೆಗೆ ಮಹಿಳೆ ತನಗಾದ ಕೆಟ್ಟ ಅನುಭವವನ್ನು ಪತ್ರದಲ್ಲಿ ಬರೆದು, ಅದನ್ನು ಏರ್ ಇಂಡಿಯಾ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೇ ಕಳಿಸಿದ್ದರು. ಅದರ ಬೆನ್ನಲ್ಲೇ ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿ ವಿಷಯ ದೊಡ್ಡದಾಗಿದೆ.
ಏರ್ ಇಂಡಿಯಾ ವಿಮಾನ ಯುಎಸ್ನಿಂದ ದೆಹಲಿಗೆ ಬರುತ್ತಿತ್ತು. ಕೆಲ ತಾಸುಗಳ ಬಳಿಕ ವಿಮಾನದಲ್ಲಿ ಪ್ರಯಾಣಿಕರಿಗೆ ಊಟವನ್ನು ನೀಡಲಾಯಿತು. ಎಲ್ಲರಿಗೂ ಊಟ ಮಾಡಿದ ಬಳಿಕ ವಿಮಾನದಲ್ಲಿ ಸ್ವಿಚ್ಗಳನ್ನೆಲ್ಲ ಆಫ್ ಮಾಡಲಾಯಿತು. ಅದಾಗಿ ಕೆಲ ಹೊತ್ತಲ್ಲಿ ಪ್ರಯಾಣಿಕನೊಬ್ಬ ತನ್ನ ಸೀಟ್ನಿಂದ ಎದ್ದು ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಮಹಿಳೆ ಬಳಿಗೆ ಬಂದ. ಪ್ಯಾಂಟ್ ಜಿಪ್ ತೆರೆದು ಆಕೆಯ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆಕೆಯ ಉಡುಪು, ಶೂ, ಬ್ಯಾಗ್ಗಳೆಲ್ಲ ಸಂಪೂರ್ಣವಾಗಿ ನೆಂದು ಹೋಗಿವೆ. ಆತ ಮೂತ್ರ ವಿಸರ್ಜನೆ ಮಾಡಿಯಾದ ಮೇಲೆ ಕೂಡ ಹಲವು ನಿಮಿಷಗಳ ಕಾಲ ತನ್ನ ಖಾಸಗಿ ಅಂಗವನ್ನು ಹಾಗೇ ಪ್ರದರ್ಶಿಸುತ್ತ ನಿಂತಿದ್ದ, ಅವನು ಕುಡಿದಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಲ್ಲಿಗೆ ಧಾವಿಸಿದ ವಿಮಾನ ಸಿಬ್ಬಂದಿ ಮಹಿಳೆಗೆ ಒಂದು ಜೊತೆ ಹೊಸ ಬಟ್ಟೆ ನೀಡಿದ್ದಾರೆ. ಅಲ್ಲದೆ, ಆಕೆ ಸೀಟ್ನ್ನು ಕ್ಲೀನ್ ಮಾಡಿಕೊಟ್ಟಿದ್ದಾರೆ.
ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆದ ಮೇಲೆ ಆ ಪ್ರಯಾಣಿಕ ಇಳಿದು ಹೋಗಿದ್ದ. ಆತನ ವಿರುದ್ಧ ಯಾವುದೇ ಕ್ರಮವೂ ಜರುಗಲಿಲ್ಲ. ಇತ್ತೀಚೆಗೆ ಮಹಿಳೆ ಏರ್ ಇಂಡಿಯಾ ಅಧ್ಯಕ್ಷರಿಗೆ ದೂರಿನ ಪತ್ರ ಬರೆದು ಈ ವಿಚಾರ ತಿಳಿಸಿದ್ದರು. ‘ನಾನು ವಿಮಾನ ಸಿಬ್ಬಂದಿಗೆ ವಿಷಯ ತಿಳಿಸಿದೆ. ಆದರೂ ಅವರು ಆತನನ್ನು ಹಾಗೇ ಹೋಗಲು ಬಿಟ್ಟರು. ತುಂಬ ಸೂಕ್ಷ್ಮವಾದ ಮತ್ತು ಆಘಾತಕಾರಿ ಸನ್ನಿವೇಶದಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಸಿಬ್ಬಂದಿಗೆ ಇಲ್ಲ ಎಂದು ಮಹಿಳೆ ಹೇಳಿದ್ದರು.
ಮಹಿಳೆಯಿಂದ ದೂರು ಬಂದ ಬೆನ್ನಲ್ಲೇ ಏರ್ ಇಂಡಿಯಾ ಆ ಪ್ರಯಾಣಿಕನ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಮತ್ತು ಒಂದು ಆಂತರಿಕ ಸಮಿಯನ್ನು ರಚಿಸಿ ಆತನನ್ನು ‘ನೋ ಫ್ಲೈ’ (ವಿಮಾನ ಹಾರಾಟ ನಿರ್ಬಂಧ ಪಟ್ಟಿ) ಲಿಸ್ಟ್ಗೆ ಸೇರಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಈ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಮುಂಬಯಿನಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ತುರ್ತು ಭೂಸ್ಪರ್ಶ