ಭೋಪಾಲ್: ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಟೀಕೆ ಮಾಡುವ ವ್ಯಕ್ತಿಯನ್ನು ಇಲ್ಲಿಂದ ಹೊರಗಟ್ಟಬೇಕು ಎಂದು ರಾಹುಲ್ ಗಾಂಧಿ (Rahul Gandhi) ವಿರುದ್ಧ ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಿಡಿಕಾರಿದ್ದಾರೆ. ಇತ್ತೀಚೆಗೆ ಬ್ರಿಟನ್ನಲ್ಲಿ ಅಲ್ಲಿನ ಸಂಸದರ ನಿಯೋಗವನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಹುಲ್ ಗಾಂಧಿ, ನಮ್ಮ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಮೈಕ್ಗಳನ್ನೇ ಆಫ್ ಮಾಡಲಾಗುತ್ತದೆ. ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿಯ ಈ ಹೇಳಿಕೆಗೆ ಸಾಧ್ವಿ ಪ್ರಜ್ಞಾ ಸಿಂಗ್ ಮೇಲಿನಂತೆ ಪ್ರತಿಕ್ರಿಯೆಕೊಟ್ಟಿದ್ದಾರೆ.
ವಿದೇಶಿ ಮಹಿಳೆಯ ಪುತ್ರ ಎಂದಿಗೂ ದೇಶಪ್ರೇಮಿಯಾಗಿರಲಾರ ಎಂದು ಚಾಣಾಕ್ಯ ಹೇಳಿದ್ದರು. ಈ ಮಾತನ್ನು ರಾಹುಲ್ ಗಾಂಧಿ ಸಾಬೀತುಪಡಿಸಿದ್ದಾರೆ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಭಾರತದವರು ಅಲ್ಲ ಎಂಬುದನ್ನು ನಾವು ಮೊದಲೇ ಅಂದಾಜಿಸಿದ್ದೆವು. ಯಾಕೆಂದರೆ ಅವರ ತಾಯಿ ವಿದೇಶಿ ಮಹಿಳೆ ಎಂಬುದಾಗಿಯೂ ಪ್ರಜ್ಞಾ ಸಿಂಗ್ ಕಟಕಿಯಾಡಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂಬುದಾಗಿ ನೀವು ವಿದೇಶದಲ್ಲಿ ಕುಳಿತು ಆರೋಪ ಮಾಡುತ್ತೀರಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ನಿಮಗೆ ರಾಜಕೀಯದಲ್ಲಿ ಬಿಡಿ, ದೇಶದಲ್ಲಿ ಇರುವುದಕ್ಕೂ ಅವಕಾಶ ಕೊಡಬಾರದು ಎಂಬುದಾಗಿ ಪ್ರಜ್ಞಾ ಸಿಂಗ್ ಠಾಕೂರ್ ಕಿಡಿಕಾರಿದ್ದಾರೆ.
ಸಂಸತ್ತಿನಲ್ಲಿ ಕಲಾಪಗಳು ನಡೆಯಲು ಕಾಂಗ್ರೆಸ್ ಬಿಡುತ್ತಿಲ್ಲ. ಇದರಿಂದ ಹೆಚ್ಚಿನ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕೆಲಸ ಮಾಡಲು ಇನ್ನಷ್ಟು ಅವಕಾಶ ದೊರೆತರೆ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ತಿರುಗೇಟು ಕೊಟ್ಟ ಕಾಂಗ್ರೆಸ್
ಮಧ್ಯ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ. ಕೆ ಮಿಶ್ರಾ ಅವರು, ರಾಹುಲ್ ಗಾಂಧಿಯನ್ನು ಟೀಕಿಸಿದ ಪ್ರಜ್ಞಾ ಸಿಂಗ್ ಠಾಕೂರ್ಗೆ ತಿರುಗೇಟು ಕೊಟ್ಟಿದ್ದಾರೆ. ನೀವೊಬ್ಬರು ಬಾಂಬ್ ಸ್ಫೋಟದ ಆರೋಪಿ. ನೀವು ಮಹಾರಾಷ್ಟ್ರದ ಮಾಲೆಗಾಂವ್ನ ಮಸೀದಿ ಬಳಿ ಇಟ್ಟ ಬಾಂಬ್ಗೆ 6 ಮಂದಿ ಮೃತಪಟ್ಟು 100 ಮಂದಿ ಗಾಯಗೊಂಡಿದ್ದಾರೆ ಎಂಬುದು ನೆನಪಿರಲಿ ಎಂದು ಅವರು ಹೇಳಿದ್ದಾರೆ.