ಮುಂಬೈ, ಮಹಾರಾಷ್ಟ್ರ: ಮಹಾರಾಷ್ಟ್ರದ ಬಿಜೆಪಿ ಮತ್ತು ಶಿಂಧೆ ಶಿವಸೇನೆ ನಡುವೆ ಎಲ್ಲವೂ ಸರಿಯಾಗಿಲ್ಲವೇ? ಹೌದು, ಇಂಥದೊಂದು ಅನುಮಾನಕ್ಕೆ ಕಾರಣವಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಆಗಿರುವ ಶಿಂಧೆ ಶಿವಸೇನೆಯ (Shiv Sena) ನಾಯಕ ಏಕನಾಥ ಶಿಂಧೆ (CM Eknath Shinde) ಅವರ ಪುತ್ರ ಹಾಗೂ ಸಂಸದ ಶ್ರೀಕಾಂತ್ ಶಿಂಧೆ (Shrikant Shinde) ಅವರು ಬಿಜೆಪಿ (BJP) ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಬಿಜೆಪಿಯ ಡೋಂಬಿವಿಲಿ ಘಟಕದ ಕೆಲವು ನಾಯಕರು ಬಿಜೆಪಿ-ಶಿಂಧೆ ನಡುವೆ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು(Maharashtra Politics).
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶ್ರೀಕಾಂತ್ ಶಿಂಧೆ ಅವರು, ಡೊಂಬಿವಿಲಿಯ ಕೆಲವು ಬಿಜೆಪಿ ನಾಯಕರು ಮೈತ್ರಿ ಕೂಟ ಸರ್ಕಾರದಲ್ಲಿ ಅಡ್ಡಿಗಳನ್ನು ಉಂಟು ಮಾಡುತ್ತಿದ್ದಾರೆ. ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಅವರು ಈ ದಾರಿ ತುಳಿಯುತ್ತಿದ್ದಾರೆ. ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ. ಮೈತ್ರಿಕೂಟದ ನಾಯಕತ್ವ ನಿರ್ಧರಿಸುವ ಯಾವುದೇ ಅಭ್ಯರ್ಥಿಗೆ ನಾನು ಬೆಂಬಲ ನೀಡಲು ಸಿದ್ಧ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ಜಂಟಿಯಾಗಿ ಸ್ಪರ್ಧಿಸಲಿವೆ ಎಂದು ಸಿಎಂ ಶಿಂಧೆ ಸೋಮವಾರ ಹೇಳಿದ ಕೆಲವು ದಿನಗಳ ನಂತರ, ಶ್ರೀಕಾಂತ್ ಶಿಂಧೆ ಅವರು ಈ ಹೇಳಿಕೆ ನೀಡಿರುವ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ದಿಸೆಯಲ್ಲಿ ನಾವು ಮಾಡುತ್ತಿರುವ ಕೆಲಸಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಯಾರಾದರೂ ಕೋಪಗೊಂಡಿದ್ದರೆ ಮತ್ತು ಮೈತ್ರಿಯಲ್ಲಿ ಗೊಂದಲ ಉಂಟಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸಿಎಂ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ನಾನು 2019ರಲ್ಲಿಯೇ ಮಹಾರಾಷ್ಟ್ರ ಸಿಎಂ ಆಗಬೇಕಿತ್ತು; ಹೊಸ ವಿಚಾರ ಬಿಚ್ಚಿಟ್ಟ ಏಕನಾಥ ಶಿಂಧೆ
ಅಮಿತ್ ಶಾ ಜತೆ ಏಕನಾಥ ಶಿಂಧೆ, ಡಿಸಿಎಂ ಫಡ್ನವಿಸ್ ಚರ್ಚೆ
ಇದಕ್ಕೂ ಮುನ್ನ ಸಿಎಂ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು. ಭವಿಷ್ಯದಲ್ಲಿ, ನಾವು ಒಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತೇವೆ ಮತ್ತು ಬಹುಮತದೊಂದಿಗೆ ಗೆಲ್ಲುತ್ತೇವೆ. ಮಹಾರಾಷ್ಟ್ರವನ್ನು ಎಲ್ಲಾ ಕ್ಷೇತ್ರಗಳಲ್ಲಿ ದೇಶದ ಮೊದಲ ರಾಜ್ಯವನ್ನಾಗಿ ಮಾಡಲು, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ಸಿಎಂ ಶಿಂಧೆ ಹೇಳಿದ್ದರು.