Site icon Vistara News

Heeraben Modi | ಚಹಾ ಮಾರುವ ಕುಟುಂಬ, ಆರು ಮಕ್ಕಳು, ಸರಳ ಜೀವನ, ತ್ಯಾಗಮಯಿ ಈ ಹೀರಾಬೆನ್‌

Heeraben Modi Passes Away

ಗಾಂಧಿನಗರ: ಜಗತ್ತಿನಲ್ಲೇ ಪ್ರಬಲ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ (Heeraben Modi) ಅವರು ನಿಧನರಾಗಿದ್ದಾರೆ. ಒಬ್ಬ ಪ್ರಧಾನಿಯ ತಾಯಿಯಾಗಿಯೂ ಸರಳ ಜೀವನ ಸಾಗಿಸುತ್ತಿದ್ದ, ಆಡಂಬರ ಇಲ್ಲದೆ ಮಾದರಿ ಎನಿಸಿದ್ದ ಹೀರಾಬೆನ್‌ ಅವರ ತ್ಯಾಗ, ಹೋರಾಟ ಎಂಥಾದ್ದು? ಅವರ ಮೂಲ ಯಾವುದು ಎಂಬುದು ಸೇರಿ ಹಲವು ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿ ಹೀಗಿದೆ.

ಕಷ್ಟದ ಜೀವನ, ತುಂಬು ಕುಟುಂಬದ ಸೊಸೆ
ಹೀರಾಬೆನ್‌ ಮೋದಿ ಅವರು 1922ರ ಜೂನ್‌ 18ರಂದು ಗುಜರಾತ್‌ನ ಮೆಹ್ಸಾನದಲ್ಲಿ ಜನಿಸಿದರು. ಇವರು ಚಹಾ ಮಾರುತ್ತಿದ್ದ ದಾಮೋದರ ದಾಸ್‌ ಮೋದಿ ಅವರನ್ನು ಮದುವೆಯಾದರು. ಕಷ್ಟದ ಜೀವನ, ತುಂಬು ಕುಟುಂಬದ ಸೊಸೆಯಾದ ಹೀರಾಬೆನ್‌ ಅವರಿಗೆ ಐವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಹಿರಿಯ ಪುತ್ರ ಸೋಮಭಾಯಿ ಮೋದಿ, ನರೇಂದ್ರ, ಪ್ಲಹಾದ್‌, ಅಮೃತ್‌ಭಾಯಿ, ಪಂಕಜ್‌ ಮೋದಿ ಅವರು ಪುತ್ರರಾದರೆ, ವಾಸಂತಿ ಬೆನ್‌ ಹಸ್‌ಮುಖ್‌ಲಾಲ್‌ ಮೋದಿ ಪುತ್ರಿಯಾಗಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸಾಮಾನ್ಯ ಕುಟುಂಬದ ದಾಮೋದರ ದಾಸ್‌ ಮೋದಿ ಅವರನ್ನು ವರಿಸಿ, ಸಾಮಾನ್ಯ ಜೀವನ ನಡೆಸಿದ ಹೀರಾಬೆನ್‌ ಮೋದಿ ಅವರು ಕೊನೆಯವರೆಗೂ ಸಾಮಾನ್ಯ ಜೀವನವನ್ನೇ ಸಾಗಿಸಿದರು.

2016ರಲ್ಲಿ ನೋಟು ಅಮಾನ್ಯೀಕರಣ ಬಳಿಕ ಬ್ಯಾಂಕ್‌ ತೆರಳಿ ಹಣ ಡ್ರಾ ಮಾಡಿದ್ದ ಹೀರಾಬೆನ್‌ ಮೋದಿ.

ಮೋದಿ ಲಂಚ ಮುಟ್ಟದಿರಲು ಹೀರಾಬೆನ್‌ ಕಾರಣ
ನರೇಂದ್ರ ಮೋದಿ ಅವರು ಕ್ಲೀನ್‌ ಇಮೇಜ್‌ ಹೊಂದಿದ್ದರೆ, ಮೋದಿ ಅವರ ಪ್ರಾಮಾಣಿಕತೆಯನ್ನು ವೈರಿಗಳೂ ಪ್ರಶ್ನಿಸದಂತಿದ್ದರೆ, ಅವರು ʼನಾನೂ ತಿನ್ನಲ್ಲ, ತಿನ್ನಲೂ ಬಿಡುವುದಿಲ್ಲʼ ಎಂದು ಹೇಳಿದ್ದನ್ನು ಜನ ನಂಬಿದ್ದರೆ ಅದಕ್ಕೆ ಹೀರಾಬೆನ್‌ ಮೋದಿ ಅವರೇ ಕಾರಣ.

ಹೌದು, ಅದು 2001ನೇ ಇಸವಿ. ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಪ್ರಮಾಣವಚನ ಸ್ವೀಕರಿಸಿದ್ದರು. ಉನ್ನತ ಹುದ್ದೆ ಅಲಂಕರಿಸಿದ ಮೋದಿ, ತಾಯಿಯ ಆಶೀರ್ವಾದ ಪಡೆದರು. ಆಗ, “ಯಾವುದೇ ಕಾರಣಕ್ಕೂ ಲಂಚ ಸ್ವೀಕರಿಸಬೇಡ” ಎಂದು ಹೀರಾಬೆನ್‌ ಅವರು ಹೇಳಿದರು. ಇದಾದ ಬಳಿಕ ಮೋದಿ ಮತ್ತೆ ಮೂರು ಬಾರಿ ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 2014ರಲ್ಲಿ ದೇಶದ ಜನ ಮೋದಿ ಅವರನ್ನು ಪ್ರಧಾನಿ ಹುದ್ದೆಗೇರಿಸಿದರು. ಈಗ ಎರಡನೇ ಬಾರಿ ಪ್ರಧಾನಿಯಾಗಿ ಮುಂದುವರಿಯುತ್ತಿದ್ದು, ಈಗಲೂ ಮೋದಿ ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವುದಿಲ್ಲ. ಅಷ್ಟರಮಟ್ಟಿಗೆ ಹೀರಾಬೆನ್‌ ಮಾತು ಮೋದಿ ಅವರ ಮೇಲೆ ಪ್ರಭಾವ ಬೀರಿದೆ.

ಸರಳ ಜೀವನಶೈಲಿ, ಸಾರ್ವಜನಿಕ ಪ್ರದರ್ಶನ ಇಲ್ಲ
ಪ್ರಧಾನಿಯ ತಾಯಿಯಾಗಿಯೂ ಹೀರಾಬೆನ್‌ ಮೋದಿ ಅವರು ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದರು. ಹಾಗೆಯೇ, ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗುವವರೆಗೆ ಅಂದರೆ, 2001ರವರೆಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳಿಗೂ ಇವರೇ ಹೀರಾಬೆನ್‌ ಮೋದಿ ಎಂಬುದು ಗೊತ್ತಿರಲಿಲ್ಲ. ಇದಾದ ಬಳಿಕವೂ ಅವರು ಹೆಚ್ಚು ಸಾರ್ವಜನಿಕವಾಗಿ ಕಂಡಿರಲಿಲ್ಲ. ಮೋದಿ ಪ್ರಧಾನಿಯಾದರೂ ಅವರು ಗುಜರಾತ್‌ನ ಗಾಂಧಿನಗರದಲ್ಲಿರುವ ಪುತ್ರ ಪಂಕಜ್‌ ಮೋದಿ ಅವರ ನಿವಾಸದಲ್ಲಿಯೇ ಹೀರಾಬೆನ್‌ ವಾಸಿಸುತ್ತಿದ್ದರು. 2016ರಲ್ಲಿ ಮೋದಿ ಅವರು ನೋಟು ನಿಷೇಧಿಸಿದಾಗ ಖುದ್ದು ಬ್ಯಾಂಕ್‌ಗೆ ತೆರಳಿ ಹಣ ಡ್ರಾ ಮಾಡುವ ಮೂಲಕ ಮಾದರಿ ಎನಿಸಿದ್ದರು. ಮೋದಿ ಅವರು ತಾಯಿಯನ್ನು ಭೇಟಿಯಾಗಲು ಹೋದಾಗ ಮಾತ್ರ ಅವರ ಸುದ್ದಿಯಾಗುತ್ತಿತ್ತು.

ಇದನ್ನೂ ಓದಿ | Heeraben Modi | ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ ನಿಧನ

Exit mobile version