ನವ ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವ ಹೊತ್ತಿನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರ ಹೆಸರಿನಲ್ಲಿ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲದಲ್ಲಿ ಯೋಗಿ ಆದಿತ್ಯನಾಥ ಅವರೇ ದೇವರು! ಇಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಯೋಗಿ ಆದಿತ್ಯನಾಥ ಅವರು ಶ್ರೀ ರಾಮನ ಅವತಾರ ಎಂದು ಭಾವಿಸಿ ಅವರ ದೇಗುಲ ನಿರ್ಮಿಸಿ, ಪೂಜೆಯನ್ನು ಮಾಡಲಾಗುತ್ತಿದೆ.
ಆರತಿ ಸಂದರ್ಭದಲ್ಲಿ ಆದಿತ್ಯನಾಥ ಅವರನ್ನು ಹೊಗಳುವ ಭಜನೆಗಳ್ನು ಹಾಡಲಾಗುತ್ತದೆ. ದೇಗುಲವನ್ನು ನಿರ್ಮಾಣ ಮಾಡಿದ ಪ್ರಭಾಕರ ಮೌರ್ಯ ಅವರೇ ಈ ಭಜನೆಗಳನ್ನು ರಚಿಸಿದ್ದಾರೆ. 2014ರಿಂದಲೂ ಅವರು ಯೋಗಿ ಪ್ರಚಾರಕರಾಗಿದ್ದಾರೆ. ಈ ದೇಗುಲ ಬಗ್ಗೆ ಪ್ರಚಾರ ಮಾಡುವುದಕ್ಕಾಗಿ ಆಡಿಯೋ ಮತ್ತು ವಿಡಿಯೋ ಕ್ಯಾಸೆಟ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯಿಂದ ಕೇವಲ 15 ಕಿ.ಮೀ. ದೂರದ ಭರತ್ ಕುಂಡದಲ್ಲಿ ಯೋಗಿ ಆದಿತ್ಯನಾಥ ಅವರ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಇದೇ ಸ್ಥಳದಲ್ಲಿ ರಾಮನ ಸಹೋದರ ಭರತನು, ರಾಮನ ಚಪ್ಪಲಿಯನ್ನು ಸಿಂಹಾಸನದ ಮೇಲೆ ಇಟ್ಟು 14 ವರ್ಷಗಳ ಕಾಲ ಅಯೋಧ್ಯೆಯ ಆಳ್ವಿಕೆಯನ್ನು ವಹಿಸಿಕೊಂಡನೆಂದು ನಂಬಲಾಗಿದೆ.
ಯಾರು ರಾಮಮಂದಿರವನ್ನು ನಿರ್ಮಿಸುತ್ತಾರೋ ಅವರ ದೇಗುಲವನ್ನು ನಿರ್ಮಾಣ ಮಾಡುವ ಹರಕೆಯನ್ನು ಪ್ರಭಾಕರ ಮೌಲ್ಯ ಹೊತ್ತಿದ್ದರು. ಇದೀಗ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಯೋಗಿ ಆದಿತ್ಯನಾಥರಿಂದಲೇ ಇದು ಸಾಧ್ಯವಾಗಿದೆ. ಹಾಗಾಗಿ ಅವರ ದೇಗುಲವನ್ನು ನಿರ್ಮಾಣ ಮಾಡಿರುವುದಾಗಿ ಮೌರ್ಯ ಹೇಳುತ್ತಾರೆ.