ತೆಲಂಗಾಣ: ಇಲ್ಲಿನ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಿಂದ ಒಂದು ಶಾಕಿಂಗ್ ವಿಡಿಯೊ ವೈರಲ್ ಆಗಿತ್ತು. ಇಲ್ಲಿನ ಚಂದುರ್ತಿ ಮಂಡಲ್ದ ಮೂಡೆಪಲ್ಲಿ ಎಂಬ ಗ್ರಾಮದಲ್ಲಿ ಮುಂಜಾನೆ 5.30ರ ಹೊತ್ತಿಗೆ 18 ವರ್ಷದ ಯುವತಿಯೊಬ್ಬಳನ್ನು ನಾಲ್ವರು ಯುವಕರು ಅಪಹರಿಸಿದ್ದರು. ಮನೆಯ ಬಳಿ ಕಾರಿನಲ್ಲಿ ಬಂದ ಅವರು, ಆಕೆಯ ತಂದೆಯ ಎದುರಲ್ಲೇ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು. ಮಗಳನ್ನು ಕಾಪಾಡಿಕೊಳ್ಳಲು ಹೋದ ಅಪ್ಪನಿಗೆ ಏನೂ ಮಾಡಲು ಸಾಧ್ಯವಾಗದೆ, ಅವರು ಕಾರು ಹೋಗುವುದನ್ನೇ ಅಸಾಹಯಕವಾಗಿ ನೋಡುತ್ತ ನಿಂತಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಅದೆಷ್ಟೋ ಜನರು ಭಯಕೂಡ ಪಟ್ಟಿದ್ದರು. ಹೀಗೆ ಮನೆಗೇ ನುಗ್ಗಿ ಕಿಡ್ನ್ಯಾಪ್ ಮಾಡುವುದು ಅಂದರೆ ಆ ದುಷ್ಕರ್ಮಿಗಳಿಗೆ ಇನ್ನೆಷ್ಟು ಧೈರ್ಯ ಇರಬೇಡ ಎಂಬಿತ್ಯಾದಿ ಚರ್ಚೆಗಳು ಶುರುವಾಗಿದ್ದವು.
ಆದರೀಗ ಈ ಕಿಡ್ನ್ಯಾಪ್ ಕೇಸ್ಗೆ ಒಂದು ಊಹಿಸಲೂ ಸಾಧ್ಯವಾಗದ ಟ್ವಿಸ್ಟ್ ಸಿಕ್ಕದೆ. ನಿನ್ನೆ ಅಪಹರಣಗೊಂಡ ಹುಡುಗಿ ಈಗ ಆಕೆಯ ಲವ್ವರ್ನೊಟ್ಟಿಗೆ ಮದುವೆಯಾಗಿ ಬಂದು ಮನೆಯವರ ಎದುರು ನಿಂತಿದ್ದಾಳೆ !. ಹುಡುಗಿ ಕೆಲ ತಿಂಗಳುಗಳ ಹಿಂದೆ ಅದೇ ಹಳ್ಳಿಯ ಯುವಕನೊಂದಿಗೆ ಓಡಿಹೋಗಿದ್ದಳು. ಆಕೆಗೆ ಆಗಿನ್ನೂ ಪೂರ್ತಿಯಾಗಿ 18ವರ್ಷ ತುಂಬಿರಲಿಲ್ಲ. ಆಕೆಗಿನ್ನೂ ಅಪ್ರಾಪ್ತ ವಯಸ್ಸಾಗಿತ್ತು. ನಾಪತ್ತೆಯಾದ ಕೆಲವು ದಿನಗಳ ಬಳಿಕ ಅವರನ್ನು ವಾಪಸ್ ಮನೆಗೆ ಕರೆದುಕೊಂಡು ಬರಲಾಗಿತ್ತು. ಈಗ ಅವಳಿಗೆ 18 ವರ್ಷ ತುಂಬಿದ ನಂತರ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಅದರ ಬೆನ್ನಲ್ಲೇ ಕಿಡ್ನ್ಯಾಪ್ ಆಗಿದ್ದಳು. ಅವಳ ಅಪ್ಪ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಆಕೆಯ ಪ್ರಿಯಕರನೇ ಕಿಡ್ನ್ಯಾಪ್ ಮಾಡಿರುವ ಶಂಕೆಯನ್ನು ಪೊಲೀಸರು ಕೂಡ ವ್ಯಕ್ತಪಡಿಸಿದ್ದರು. ಈಗ ಈ ಅನುಮಾನ ನಿಜವಾಗಿದೆ. ಕೊನೆಗೂ ಅವನನ್ನೇ ಮದುವೆಯಾಗಿ ವಾಪಸ್ ಬಂದಿದ್ದಾಳೆ.
ಹುಡುಗಿ ಬಿಚ್ಚಿಟ್ಟ ಸತ್ಯ!
ಈ ಯುವತಿ ಹೆಸರು ಶಾಲಿನಿ ಎಂದಾಗಿದ್ದು, ಈಗವಳು ತನ್ನ ಪ್ರಿಯಕರನನ್ನು ಮದುವೆಯಾಗಿ, ವಿಡಿಯೊವೊಂದನ್ನು ಹರಿಬಿಟ್ಟಿದ್ದಾಳೆ. ‘ನಾವು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈಗೊಂದು ವರ್ಷದ ಹಿಂದೆ ಮದುವೆಯನ್ನೂ ಆಗಿದ್ದೇವೆ. ಆದರೆ ನಾನು ಅಪ್ರಾಪ್ತ ವಯಸ್ಸಿನವಳು ಆಗಿದ್ದೆ. ಹಾಗಾಗಿ ಆ ಮದುವೆಗೆ ಮಾನ್ಯತೆಯೂ ಇರಲಿಲ್ಲ. ಆದರೆ ನಾನೀಗ 18 ವರ್ಷಕ್ಕೆ ಕಾಲಿಟ್ಟಿದ್ದು, ಕಾನೂನು ಬದ್ಧವಾಗಿ ವಿವಾಹ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾಳೆ.
‘ಈ ಹಿಂದೆ ನಾವಿಬ್ಬರೂ ಮನೆಬಿಟ್ಟು ಹೋಗಿದ್ದೆವು. ಆಗ ನನ್ನ ಪಾಲಕರು ಪೊಲೀಸರಿಗೆ ದೂರು ಕೊಟ್ಟು ನಮ್ಮನ್ನು ವಾಪಸ್ ಕರೆಸಿದ್ದರು. ನಾನು ಪ್ರೀತಿಸಿದ ಹುಡುಗ ದಲಿತ ಕುಟುಂಬಕ್ಕೆ ಸೇರಿದವನು. ಇದೇ ಕಾರಣಕ್ಕೆ ಪಾಲಕರು ವಿರೋಧಿಸುತ್ತಿದ್ದರು. ನಾವಿಬ್ಬರೂ ಒಂದಾಗಬಾರದು ಎಂದು ಅವಸರದಲ್ಲಿ ನನ್ನ ಮದುವೆಯನ್ನು ನಿಶ್ಚಯ ಮಾಡಿದ್ದರು. ಆದರೆ ನನಗೆ ಇವನನ್ನು ಬಿಟ್ಟು ಇನ್ಯಾರನ್ನೂ ಮದುವೆಯಾಗಲು ಇಷ್ಟವಿಲ್ಲ. ಹಾಗಾಗಿ ಮತ್ತೊಮ್ಮೆ ಓಡಿಹೋಗಿ ಮದುವೆಯಾಗಲು ಯೋಜನೆ ರೂಪಿಸಿದ್ದೆವು. ನಾನು ಬರುವುದಾಗಿ ಅವನಿಗೆ ಹೇಳಿದ್ದೆ. ಆದರೆ ಅಪಹರಣ ಮಾಡುವಾಗ ನನ್ನ ಹುಡುಗ ಮಾಸ್ಕ್ ಹಾಕಿದ್ದರಿಂದ ಸ್ವಲ್ಪ ಗೊಂದಲವಾಯಿತು. ಬಳಿಕ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವನ ಮುಖ ನೋಡಿದೆ. ನನಗೆ ನಿರಾಳವಾಯಿತು. ಖುಷಿಯಿಂದಲೇ ಅವನೊಟ್ಟಿಗೆ ಹೋಗಿ ಮದುವೆಯಾಗಿದ್ದೇನೆ.ನಮಗೀಗ ನಮ್ಮ ಕುಟುಂಬದವರಿಂದ ರಕ್ಷಣೆ ಬೇಕು’ ಎಂದು ಶಾಲಿನಿ ಹೇಳಿಕೊಂಡಿದ್ದಾಳೆ.
ಆ ಹುಡುಗನಿಗೆ ಸುಮಾರು 24ವರ್ಷ ಆಗಿದ್ದು, ಇವರಿಬ್ಬರೂ ಮೂಡೆಪಲ್ಲಿ ಗ್ರಾಮದಿಂದ 50 ಕಿಮೀ ದೂರದಲ್ಲಿರುವ ಜಗಿತಲ್ ಜಿಲ್ಲೆಯ ಒಂದು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮದುವೆ ಉಡುಪಿನಲ್ಲೇ ವಿಡಿಯೊ ಮಾಡಿದ್ದಾರೆ. ಇದೀಗ ಹುಡುಗಿ ತಾನು ಒಪ್ಪಿಕೊಂಡೇ ಹೋಗಿ ಮದುವೆಯಾಗಿದ್ದಾಗಿ ಹೇಳಿದ್ದರಿಂದ ಹುಡುಗನ ವಿರುದ್ಧದ ಕೇಸ್ ರದ್ದುಗೊಳ್ಳಲಿದೆ.
ಇದನ್ನೂ ಓದಿ: Viral Video| ಮನೆಗೇ ನುಗ್ಗಿ ಯುವತಿಯನ್ನು ಎಳೆದೊಯ್ದ ಯುವಕರು; ಅಸಹಾಯಕನಾಗಿ ನೋಡುತ್ತ ನಿಂತ ಅಪ್ಪ