Site icon Vistara News

3 ವರ್ಷದಿಂದ ಮನೆಯೊಳಗೇ ಲಾಕ್​ ಆಗಿದ್ದ ಮಹಿಳೆ ಮತ್ತು ಅವಳ ಮಗ; ಪತಿಯ ಗೋಳು ನೋಡಲಾಗದೆ ಬಾಗಿಲು ಒಡೆದ ಪೊಲೀಸ್​

A woman Locked Herself in Home with Son Saved By Police In Gurgaon

#image_title

ಗುರುಗ್ರಾಮ: ಮೂರು ವರ್ಷ ತನ್ನ 10ವರ್ಷದ ಪುತ್ರನೊಂದಿಗೆ, ಮನೆಯೊಳಗೆ ತನ್ನನ್ನು ತಾನು ಬಂಧಿಸಿಕೊಂಡಿದ್ದ ಮಹಿಳೆಯನ್ನು ಅಂತೂ ಪೊಲೀಸರು ಹೊರಗೆ ಕರೆತಂದಿದ್ದಾರೆ. ಮನೆ ಬಾಗಿಲನ್ನು ಒಡೆದು, ತಾಯಿ-ಮಗನನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಹರ್ಯಾಣದ ಗುರುಗ್ರಾಮದ ಈ ಮಹಿಳೆ ಕೊರೊನಾ ಸೋಂಕಿಗೆ ಹೆದರಿ, ಹೀಗೆ ಮಗನೊಂದಿಗೆ ಮನೆಯೊಳಗೆ ಸೇರಿಕೊಂಡಿದ್ದಳು. ಪತಿಯನ್ನೂ ಒಳಗೆ ಬಿಟ್ಟುಕೊಂಡಿರಲಿಲ್ಲ. ಅಂತಿಮವಾಗಿ ಆಕೆಯನ್ನು ಪೊಲೀಸರೇ ಗೃಹ ಬಂಧನದಿಂದ ಮುಕ್ತಗೊಳಿಸಿದ್ದಾರೆ. ಫೆ.21ರಂದು ಪೊಲೀಸರು, ಆರೋಗ್ಯಾಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಯೆಲ್ಲ, ಈ ಮಹಿಳೆ ಮನೆಯ ಬಳಿ ಬಂದು, ಬಾಗಿಲನ್ನು ಒಡೆಸಿದ್ದಾರೆ.

ಮಹಿಳೆ ಹೆಸರು ಮುನ್​ಮುನ್​ ಮಾಜಿ ಮತ್ತು ಆಕೆಯ ಪತಿ ಸುಜನ್ ಮಾಜಿ. 2020ರಲ್ಲಿ ಮೊದಲ ಬಾರಿ ಲಾಕ್​ಡೌನ್ ಆದಾಗಲೇ ಮುನ್​ಮುನ್​ ಮಾಜಿ ಮನೆ ಸೇರಿಕೊಂಡಿದ್ದರು. ಆಗ ಪತಿ-ಮಗನೂ ಕೂಡ ಮನೆಯಲ್ಲೇ ಕಾಲ ಕಳೆದರು. ಆದರೆ ಲಾಕ್​ಡೌನ್​​ನ್ನು ಭಾಗಶಃ ತೆರವುಗೊಳಿಸುತ್ತಿದ್ದಂತೆ, ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಸುಜನ್​ ಕೆಲಸಕ್ಕೆ ಹೊರಟರು. ಒಂದು ದಿನ ಅವರು ಮನೆಯಿಂದ ಹೊರಬಿದ್ದಿದ್ದೇ ನೆಪವಾಗಿ, ಮುನ್​ಮುನ್​ ಮತ್ತೆ ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳಲೇ ಇಲ್ಲ. ಮಗನೊಂದಿಗೆ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡು, ಬೆಚ್ಚಗೆ ಕುಳಿತುಬಿಟ್ಟರು.

ಇತ್ತ ಪತಿ ಸುಜನ್​ ಕಚೇರಿಯಿಂದ ವಾಪಸ್​ ಬಂದವ ಪತ್ನಿಯನ್ನು ಪರಿಪರಿಯಾಗಿ ಕೇಳಿಕೊಂಡ, ಮನವೊಲಿಸಲು ಪ್ರಯತ್ನಿಸಿದ. ಅದಾಗದೆ ಇದ್ದಾಗ ಅಲ್ಲೇ ತನ್ನ ಸ್ನೇಹಿತರು, ಬಂಧುಗಳ ಮನೆಯಲ್ಲಿ ಉಳಿದುಕೊಳ್ಳಲು ಪ್ರಾರಂಭಿಸಿದ. ಆದರೆ ಎಷ್ಟು ದಿನ ಹೀಗೇ ನಡೆಯುತ್ತದೆ ಎಂದು, ಪತ್ನಿ-ಮಗ ಇರುವ ಮನೆಯ ಬಳಿಯೇ ಮತ್ತೊಂದು ಬಾಡಿಗೆ ಮನೆಯನ್ನೂ ಮಾಡಿದ. ಪತಿ ಸುಜನ್​ ತನ್ನ ಮನೆಯ ಬಾಡಿಗೆ ಕಟ್ಟುವ ಜತೆ, ಪತ್ನಿ-ಮಗ ಇರುವ ಮನೆ ಬಾಡಿಗೆ, ವಿದ್ಯುತ್​ ಬಿಲ್​, ಮಗನ ಶಾಲಾ ಶುಲ್ಕವನ್ನೂ ಕಟ್ಟುತ್ತಿದ್ದ. ಅಷ್ಟೇ ಅಲ್ಲ, ಕಿರಾಣಿ ಸಾಮಗ್ರಿಗಳು, ಅಗತ್ಯವಸ್ತುಗಳನ್ನು ತಂದು, ಪತ್ನಿ ಇರುವ ಮನೆ ಬಾಗಿಲಿನ ಬಳಿ ಇಟ್ಟು ಹೋಗುತ್ತಿದ್ದ. ಆದರೆ ಆ ಮಹಿಳೆ ಅದ್ಯಾವಾಗ ಅದನ್ನು ಒಳಕ್ಕೆ ತೆಗೆದುಕೊಳ್ಳುತ್ತಿದ್ದಳು ಎಂಬುದು ಗೊತ್ತಿಲ್ಲ. ಪದೇಪದೆ ಖಾಲಿಯಾಗಿ, ಬದಲಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸಿಲಿಂಡರ್​ ಗ್ಯಾಸ್​​ ಬಳಕೆ ಬಿಟ್ಟು, ಇಂಡಕ್ಷನ್​ ಒಲೆಯಲ್ಲಿ ಅಡುಗೆ ಮಾಡಲು ಶುರು ಮಾಡಿದ್ದರು. ಚಿಕ್ಕಮಕ್ಕಳಿಗೆ ಲಸಿಕೆ ಬರುವವರೆಗೂ ನಾನು ಮನೆ ಬಾಗಿಲು ತೆರೆಯುವುದಿಲ್ಲ ಎಂದೇ ಹಠ ಮಾಡುತ್ತಿದ್ದಳು. 12 ವಯಸ್ಸಿನ ಕೆಳಗಿನ ಮಕ್ಕಳಿಗಾಗಿ ಇನ್ನೂ ಲಸಿಕೆ ಅಭಿವೃದ್ಧಿ ಆಗದ ಕಾರಣ, ಆಕೆ ಮನೆಬಾಗಿಲನ್ನೂ ತೆರೆದಿರಲಿಲ್ಲ.

ಇದನ್ನೂ ಓದಿ: Covid-19 | ಭಾರತದಲ್ಲಿ ಕೊರೊನಾ ಭಯ ದೂರ, ಎರಡು ವರ್ಷದಲ್ಲೇ ಕನಿಷ್ಠ ಕೇಸ್!

ಮುನ್​ಮುನ್​ ಮಾಜಿ ತನ್ನ ಎಲ್ಲ ಸಂಬಂಧಿಕರೊಂದಿಗೆ ಸಂಪರ್ಕ ಕಡಿತಗೊಡಿಸಿಕೊಂಡಿದ್ದಳು. ಮಗನಿಗೆ ಸ್ಮಾರ್ಟ್​ಫೋನ್​ ಬಳಕೆ ಮಾಡಲು ಅನುಮತಿ ಕೊಟ್ಟಿದ್ದಳು. ಆತ ಸ್ಕೂಲ್​ಗೆ ಹೋಗದೆ, ಆನ್​ಲೈನ್​ನಲ್ಲೇ ಪಾಠ ಕಲಿಯುತ್ತಿದ್ದ. ಹಾಗೇ, ಪತಿಯೊಂದಿಗೆ ಆಗೊಮ್ಮೆ-ಈಗೊಮ್ಮೆ ವಿಡಿಯೊ ಕಾಲ್​ನಲ್ಲಿ ಮಾತನಾಡುತ್ತಿದ್ದಳು. ಆದರೆ ಅವನನ್ನು ಮನೆಯೊಳಕ್ಕೆ ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ನೋಡುವಷ್ಟು ನೋಡಿದ ಪತಿ ಸುಜನ್​, ಈಗ ಪೊಲೀಸರಿಗೆ ದೂರು ಕೊಟ್ಟಿದ್ದ.

ಈ ಬಗ್ಗೆ ಮಾಹಿತಿ ನೀಡಿದ ಚಕ್ಕರ್​ಪುರ ಪೊಲೀಸ್ ಠಾಣೆ ಅಧಿಕಾರಿ ಪ್ರವೀಣ್ ಕುಮಾರ್​ ‘ಮೊದಲು ಸುಜನ್​ ನನ್ನ ಬಳಿ ಬಂದು ಈ ವಿಷಯ ಹೇಳಿದಾಗ ನಾನು ಅದನ್ನು ತುಂಬ ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಕೌಟುಂಬಿಕ ವಿಷಯ ಎಂದು ಸುಮ್ಮನಾದೆವು. ಆದರೆ ನಂತರ ಮಗನಿಗೆ ವಿಡಿಯೊ ಕಾಲ್ ಮಾಡಿದಾಗ ನಾನೂ ಮಾತನಾಡಿದೆ. ಆ ಹುಡುಗನ ಬಗ್ಗೆ ಅಯ್ಯೋ ಅನ್ನಿಸಿತು. ಮೂರು ವರ್ಷದಿಂದ ಬಾಲಕ ಸೂರ್ಯನ ಬೆಳಕು ನೋಡದಾಗಿದ್ದ. ಹೀಗಾಗಿ ಪೊಲೀಸ್ ತಂಡವೇ ಹೋಗಿ, ಬಾಗಿಲು ಒಡೆದೆವು’ ಎಂದು ಹೇಳಿದ್ದಾರೆ.

Exit mobile version