ವಡೋದರಾ: ಗುಜರಾತ್‌ನ 24 ವರ್ಷದ ಯುವತಿ ಕ್ಷಮಾ ಬಿಂದು ಎಂಬಾಕೆಯ ಪಾಲಿಗೆ ಜೂನ್ 11 ತುಂಬ ವಿಶೇಷವಾದ ದಿನ. ಅಂದು ಆಕೆ ಮದುವೆಯಾಗುತ್ತಿದ್ದಾರೆ. ಅದರಲ್ಲೇನು ವಿಶೇಷ?-ವಯಸ್ಸಿಗೆ ಬಂದ ಹುಡುಗಿಯರು-ಹುಡುಗರು ಮದುವೆಯಾಗುವುದು ಸಹಜ ಎಂದು ನೀವಂದುಕೊಳ್ಳಬಹುದು. ಆದರೆ ಕ್ಷಮಾರದ್ದು ಸ್ಪೆಶಲ್ ಮದುವೆಯೇ ಹೌದು. ಯಾಕೆಂದರೆ ಈಕೆ ʼತನ್ನನ್ನು ತಾನೇ ವಿವಾಹವಾಗುತ್ತಿದ್ದಾರೆ..ಅಂದರೆ ಸ್ವಯಂ ಮದುವೆ (Sologamy).
ನಂಬಲು ಕಷ್ಟವಾಗಬಹುದು ಆದರೆ ಸತ್ಯ. ಮನೆಯಲ್ಲಿ ಮದುವೆಯಾಗು ಎಂದು ಒತ್ತಾಯ ಜಾಸ್ತಿಯಾಗಿದೆಯಂತೆ. ಆದರೆ ಕ್ಷಮಾ ಬಿಂದುವಿಗೆ ಯಾರನ್ನೂ ವಿವಾಹವಾಗಲು ಇಷ್ಟವಿಲ್ಲ. ಆದರೆ ವಧುವಿನಂತೆ ಅಲಂಕರಿಸಿಕೊಳ್ಳಬೇಕು ಎಂಬುದು ಹೆಬ್ಬಯಕೆ. ಹೀಗಾಗಿ ತನ್ನನ್ನೇ ತಾನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಅಂದು ಉಳಿದೆಲ್ಲ ಸಂಪ್ರದಾಯ, ಆಚರಣೆಗಳು ನಡೆಯುತ್ತವೆ. ಆದರೆ ವರ ಇರುವುದಿಲ್ಲ. ಹೀಗಾಗಿ ಮೆರವಣಿಗೆಯಾಗಲೀ, ವರನಿಗೆ ಸಂಬಂಧಪಟ್ಟ ಪದ್ಧತಿಗಳ ಆಚರಣೆ ಇರುವುದಿಲ್ಲ. ಹೀಗೆ ತನ್ನನ್ನೇ ತಾನು ಮದುವೆಯಾದ ಘಟನೆಗಳು ಹಿಂದೆಲ್ಲ ಬೇರೆ ದೇಶಗಳಲ್ಲಿ ಅಪರೂಪಕ್ಕೆಂಬಂತೆ ನಡೆದಿವೆ. ಆದರೆ ಗುಜರಾತ್‌ನಲ್ಲಿ ಇದೇ ಮೊದಲು. ಆದರೆ ಕ್ಷಮಾ ಹೇಳುವ ಪ್ರಕಾರ ಇಡೀ ದೇಶದಲ್ಲಿ ಹೀಗೆ ಸ್ವಯಂ ಮದುವೆಯಾಗುತ್ತಿರುವುದು ಅವರೇ ಮೊದಲು !
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ತಮ್ಮ ನಿರ್ಧಾರವನ್ನು ಒಂದಷ್ಟು ವಿವರಣೆಯೊಂದಿಗೆ ಸಮರ್ಥಿಸಿಕೊಂಡಿದ್ದಾರೆ. ʼಹೀಗೆ ನನ್ನನ್ನೇ ನಾನು ವಿವಾಹವಾಗುವ ಮೂಲಕ ನನಗೆ ನಾನು ಬದ್ಧಳಾಗಿರುತ್ತೇನೆ ಮತ್ತು ನನ್ನನ್ನು ನಾನು ನಿಷ್ಕಲ್ಮಶವಾಗಿ, ಬೇಷರತ್ತಾಗಿ ಪ್ರೀತಿಸಿಕೊಳ್ಳುತ್ತೇನೆ ಹಾಗೂ ಸ್ವೀಕರಿಸಿಕೊಳ್ಳುತ್ತೇನೆ. ಪ್ರೀತಿಯಿಲ್ಲದೆ ಮದುವೆಯಾಗುವುದಿಲ್ಲ. ಅನೇಕರು ತಾವು ಪ್ರೀತಿಸುವವರನ್ನೇ ಕೈಹಿಡಿಯುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಹಾಗಾಗಿ ನನ್ನನ್ನೇ ವಿವಾಹವಾಗುತ್ತೇನೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP V/S BTP: ಗುಜರಾತ್‌ನಲ್ಲಿ BJPಯನ್ನು ಎದುರಿಸಲು ಆಪ್‌ಗೊಬ್ಬ ಗೆಳೆಯ ಸಿಕ್ಕಿದ!
ʼಹೌದು ಈ ಮದುವೆ ತೀರ ಅಸಹಜ ಎನ್ನಿಸಬಹುದು. ಆದರೆ ಇದು ಮಹಿಳೆಯ ಹಕ್ಕು ಮತ್ತು ಆಯ್ಕೆಗೆ ಸಂಬಂಧಪಟ್ಟ ವಿಚಾರ ಎಂದು ನಾನು ಅಂದುಕೊಂಡಿದ್ದೇನೆ. ನನ್ನ ಪಾಲಕರೂ ಖಂಡಿತ ನನಗೆ ಆಶಿರ್ವಾದ ಮಾಡುತ್ತಾರೆ. ಜೂ.9ರಂದು ಮೆಹೆಂದಿ ಶಾಸ್ತ್ರ ನಡೆಯಲಿದೆ. ಹಾಗೇ, ಜೂನ್ 11ರಂದು ಸಂಜೆ ಗೋತ್ರಿ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ವಿವಾಹಕ್ಕೆ ನನ್ನ 15 ಸ್ನೇಹಿತರು, ಸಹೋದ್ಯೋಗಿಗಳು ಬರುತ್ತಾರೆ. ನನ್ನ ತಾಯಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ವಿಡಿಯೋ ಕಾಲ್ ಮೂಲಕವೇ ಆಶೀರ್ವಾದ ಮಾಡಲಿದ್ದಾರೆʼ ಎಂದು ಕ್ಷಮಾ ತಿಳಿಸಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವರೆಂದರೆ, ಕ್ಷಮಾ ಮದುವೆಯಾದ ತಕ್ಷಣ ಹನಿಮೂನ್‌ಗೆ ಹೋಗಲಿದ್ದಾರೆ. ಎರಡು ವಾರ ಗೋವಾದಲ್ಲಿ ಸಖತ್ ಎಂಜಾಯ್ ಮಾಡಲಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಗುಜರಾತ್‌ನಲ್ಲಿ ಡ್ರೋನ್ ಮೂಲಕ ಔಷಧ ಪಾರ್ಸೆಲ್ ರವಾನಿಸಿದ ಅಂಚೆ ಇಲಾಖೆ