ಗುವಾಹಟಿ: ಮೇಘಾಲಯದಲ್ಲಿ ಭೀಕರ ಮಳೆಯಾಗುತ್ತಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆ ಪ್ರವಾಹ, ಭೂ ಕುಸಿತ ಸಂಭವಿಸಿದೆ. ಈ ಭೀಕರ ಪ್ರವಾಹಕ್ಕೆ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಘಾಲಯದ ಸುತ್ತಮುತ್ತ ನಿರಂತರವಾಗಿ ಮಳೆಯಾಗುತ್ತಿದ್ದು, ಇಂದು (ಗುರುವಾರ) ರಾಜ್ಯದ ಗಾರೋ ಹಿಲ್ಸ್‌ನಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿತು. ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಹಾಗೂ 2 ವರ್ಷದ ಮಗು ಸೇರಿದಂತೆ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ.
ಗಾರೋ ಹಿಲ್ಸ್‌ನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬುಗಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಈ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಮರದ ಸೇತುವೆ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಈ ಸೇತುವೆ ಜಿಜಿಕಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ ಮಳೆಯಿಂದಾಗಿ ಅದು ಕೊಚ್ಚಿಕೊಂಡು ಹೋಗಿದೆ.
ಇದನ್ನು ಓದಿ| ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ಸಿಲುಕಿಕೊಂಡ ವಾಹನಗಳು
ಇನ್ನು ಜೂನ್ 10 ಮತ್ತು 11ರಂದು ಅರುಣಾಚಲ ಪ್ರದೇಶ ಮತ್ತು ಮುಂದಿನ ಐದು ದಿನಗಳಲ್ಲಿ ಅಸ್ಸಾಂ, ಮೇಘಾಲಯದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದೆ. ಈಗಾಗಲೇ ಹಲವರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದ್ದು, ಸಮುದ್ರ ಹಾಗೂ ನದಿ ದಡದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.