ನವ ದೆಹಲಿ: ಚೀನಾದಿಂದ ಆಗ್ರಾಕ್ಕೆ ಬಂದಿದ್ದ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ದೃಢಪಟ್ಟಿದ್ದು, ಅವರ ಗಂಟಲು ದ್ರವದ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲಾಗಿದೆ. ಈ ವ್ಯಕ್ತಿಗೆ ತಗುಲಿರುವುದು ಒಮಿಕ್ರಾನ್ ಉಪತಳಿ ಬಿಎಫ್.7 ಸೋಂಕು ಹೌದೋ? ಅಲ್ಲವೋ ಎಂಬುದು ವರದಿ ಬಳಿಕವಷ್ಟೇ ಗೊತ್ತಾಗಲಿದೆ. ಅದರ ಬೆನ್ನಲ್ಲೇ ಈಗ ಉನ್ನಾವೋದಲ್ಲೂ ಒಬ್ಬ ಯುವಕನಲ್ಲಿ ಕೊರೊನಾ ದೃಢಪಟ್ಟಿದ್ದು, ಈತನ ಮಾದರಿಯನ್ನೂ ಜೀನೋಮ್ ಸೀಕ್ವೆನ್ಸಿಂಗ್ಗೆ ಕಳಿಸಲಾಗಿದೆ.
ಈ ಯುವಕ ಉನ್ನಾವೋದ ಹಸನ್ಗಂಜ್ ತಹಸಿಲ್ ಪ್ರದೇಶದ ಕೊರೌರಾ ಗ್ರಾಮದವನಾಗಿದ್ದು ದುಬೈಗೆ ಪ್ರಯಾಣ ಮಾಡುವವನಿದ್ದ. ಬೇರೆ ದೇಶಕ್ಕೆ ಹೋಗುವ ಮೊದಲು ಕೊರೊನಾ ಟೆಸ್ಟ್ ಮಾಡಿಸಿಕೊಂಡು ವರದಿ ಪಡೆಯುವುದು ಕಡ್ಡಾಯ ಆಗಿದ್ದರಿಂದ ತಪಾಸಣೆ ಮಾಡಿಸಿದ್ದ. ವರದಿ ಪಾಸಿಟಿವ್ ಬಂದಿದೆ.
ಈಗ ಕೊವಿಡ್ ಪಾಸಿಟಿವ್ ಬಂದ ಉನ್ನಾವೋದ ಯುವಕನನ್ನು ಸ್ಥಳೀಯ ಆಡಳಿತ ಐಸೋಲೇಟ್ ಮಾಡಿದೆ. ಆ ಯುವಕನ ಮನೆ ಇರುವ ಏರಿಯಾಕ್ಕೆ ಭೇಟಿ ಕೊಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ, ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 20 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹ ಮಾಡಿದೆ.
ಚೀನಾದಲ್ಲಿ ಈಗ ಕೊವಿಡ್ 19 ಸೋಂಕಿನ ಪ್ರಸರಣ ವಿಪರೀತ ಆಗಲು ಕಾರಣ ಒಮಿಕ್ರಾನ್ನ ಉಪತಳಿ ಬಿಎಫ್.7. ಚೀನಾದಲ್ಲಂತೂ ಈ ವೈರಸ್ ಸಾಲುಸಾಲು ಸಾವಿಗೆ ಕಾರಣವಾಗುತ್ತಿದೆ. ಭಾರತದಲ್ಲಿ ಈ ತಳಿ ಅಷ್ಟೊಂದು ಅಪಾಯಕಾರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದರೂ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಿಎಫ್.7 ತಳಿ ಬರಿ ಚೀನಾದಲ್ಲಷ್ಟೇ ಅಲ್ಲದೆ, ಜಪಾನ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ಗಳಲ್ಲೂ ಮತ್ತೆ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Coronavirus | ಚೀನಾದಿಂದ ಉತ್ತರ ಪ್ರದೇಶದ ಆಗ್ರಾಕ್ಕೆ ಬಂದ ವ್ಯಕ್ತಿಗೆ ಕೊರೊನಾ