ಸೂರತ್ : ವಜ್ರದ ವ್ಯಾಪಾರಿಗಳು ಹಾಗೂ ಕಾರ್ಮಿಕರೇ ಹೆಚ್ಚಿರುವ ಸೂರತ್ ನಗರದಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದು ಮಿಂಚಬಹುದೆನ್ನುವ (Gujarat Election Results) ನಿರೀಕ್ಷೆ ಸುಳ್ಳಾಗಿದೆ. ನಗರದ ವ್ಯಾಪ್ತಿಯಲ್ಲಿ ಬರುವ ಐದು ಕ್ಷೇತ್ರಗಳಲ್ಲಿ ಅಷ್ಟನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರೊಂದಿಗೆ ಪಾಟೀದಾರ್ ಸಮುದಾಯದ ಮಂದಿ ಆಪ್ ಕೈ ಹಿಡಿಯುತ್ತಾರೆ ಎಂಬ ಭರವಸೆ ಹುಸಿಯಾಗಿದೆ. ಸೂರತ್‌ನಲ್ಲಿ ಜಯಭೇರಿ ಬಾರಿಸುವ ಮೂಲಕ ಗುಜರಾತ್ ರಾಜಕೀಯದಲ್ಲಿ ಅಧಿಪತ್ಯ ಸ್ಥಾಪಿಸುವ ಆಪ್ ನಾಯಕ ಕೇಜ್ರಿವಾಲ್ ಅವರ ಅಭಿಲಾಷೆಗೂ ಸ್ವಲ್ಪ ಹಿನ್ನಡೆ ಉಂಟಾಗಿದೆ.
ಮಂಗ್ರೊಲ್, ಮಾಂಡ್ವಿ, ಕಮ್ರೆಜ್, ಸೂರತ್ ಈಸ್ಟ್ ಮತ್ತು ಸೂರತ್ ನಾರ್ತ್ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಆದರೆ. ಈ ಎಲ್ಲ ಕ್ಷೇತ್ರಗಳನ್ನು ಹೊಂದಿರುವ ಸೂರತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ೨೭ ಸ್ಥಾನ ಗೆಲ್ಲುವ ಮೂಲಕ ಚಿಗುರೊಡೆದಿತ್ತು. ಹೀಗಾಗಿ ಅದೇ ಹವಾ ಮುಂದವರಿದು ಆ ಪಕ್ಷ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದು ಚುನಾವಣಾ ಪೂರ್ವದಲ್ಲಿ ಅಂದಾಜಿಸಲಾಗಿತ್ತು. ಅದೂ ಸುಳ್ಳಾಗಿದೆ.
ಕಳೆದ ವರ್ಷ ನಡೆದಿದ್ದ ಸೂರತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ೨7 ಸ್ಥಾನ ಗೆದ್ದಾಗ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡುವ ಮೂಲಕ ನಿರ್ನಾಮಗೊಂಡಿತ್ತು. ೯೭ ಸ್ಥಾನ ಗೆದ್ದಿರುವ ಬಿಜೆಪಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಸ್ಥಾಪಿಸಿರುವ ಹೊರತಾಗಿಯೂ ಆಪ್ ಕಾಂಗ್ರೆಸ್‌ಗೆ ಪರ್ಯಾಯ ಪಕ್ಷವಾಗಿರುವ ಕಾರಣ ಅನುಕೂಲವಾಗಬಹುದು ಎಂದು ಹೇಳಲಾಗಿತ್ತು. ಆಪ್ ನಾಯಕ ಹಾಗೂ ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಸೂರತ್ ಅನ್ನೇ ನಂಬಿಕೊಂಡು, ಗುಜರಾತ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡುವ ತೀರ್ಮಾನ ಮಾಡಿದ್ದರು. ಬಗೆಬಗೆಯ ಹೇಳಿಕೆಗಳನ್ನೂ ಕೊಟ್ಟಿದ್ದರು. ಆ ನಿರೀಕ್ಷೆ ಸದ್ಯಕ್ಕೆ ಸುಳ್ಳಾಗಿದೆ.
ಪಾಟೀದಾರ್ ಸಮುದಾಯದ ಪ್ರಾಬಲ್ಯ
ಸೂರತ್ ನಗರ ಸೇರಿದಂತೆ ಜಿಲ್ಲೆಯಲ್ಲಿ ಪಾಟೀದಾರ್ ಸಮುದಾಯದ ಪ್ರಾಬಲ್ಯವಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಫ್ ೨7 ಸ್ಥಾನಗಳನ್ನು ಗೆದ್ದ ಬಳಿಕ ಈ ಸಮುದಾಯದ ಜನರು ಆಪ್ ಕಡೆಗೆ ಒಲವು ಹೊಂದಿದ್ದಾರೆ ಎಂಬುದಾಗಿ ಹೇಳಲಾಗಿತ್ತು. ಆದರೆ, ವಿಧಾನ ಸಭೆ ಚುನಾವಣೆಯ ವಿಚಾರಕ್ಕೆ ಬಂದಾಗ ಮತ್ತೆ ಅವರೆಲ್ಲರೂ ಬಿಜೆಪಿಯ ಕೈ ಹಿಡಿದಿದ್ದಾರೆ. ೨೦೧೭ರ ಚುನಾವಣೆಯಲ್ಲಿ ಸೂರತ್ ನಗರದ ಎರಡು ಕ್ಷೇತ್ರದಲ್ಲಿ (ಮಂಗ್ರೊಲ್, ಮಾಂಡ್ವಿ) ಕಾಂಗ್ರೆಸ್ ಜಯ ಸಾಧಿಸಿತ್ತು. ಆ ಕ್ಷೇತ್ರಗಳೂ ಈ ಬಾರಿ ಬಿಜೆಪಿ ಪಾಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಿರ್ಮೂಲನೆಯಾಗಿದೆ.
ಸೂರತ್‌ನಲ್ಲಿ ೫೦೦೦ಕ್ಕೂ ಅಧಿಕ ವಜ್ರ ತಯಾರಿಕ ಘಟಕಗಳಿರುವ ಕಾರಣ ಡೈಮಂಡ್ ಸಿಟಿ ಎಂದೇ ಕರೆಯಲಾಗುತ್ತದೆ. ಒಟ್ಟು ೧೫ ಲಕ್ಷ ವಜ್ರದ ಕಂಪನಿಯ ಕಾರ್ಮಿಕರೂ ಇದ್ದಾರೆ. ಅಲ್ಲದೆ, ಈ ಜಿಲ್ಲೆಯಲ್ಲಿ ಒಟ್ಟು ೧೬ ವಿಧಾನ ಸಭಾ ಕ್ಷೇತ್ರಗಳು ಇರುವ ಕಾರಣ ಇಲ್ಲಿನ ಫಲಿತಾಂಶ ಪಕ್ಷವೊಂದಕ್ಕೆ ನಿರ್ಣಾಯಕ ಎಂಬುದಾಗಿ ಹೇಳಲಾಗುತ್ತಿತ್ತು. ಅಂತೆಯೇ ಇಲ್ಲಿ ಸಂಪೂರ್ಣ ಪಾರಮ್ಯ ಸಾಧಿಸಿರುವ ಬಿಜೆಪಿ ರಾಜ್ಯದಲ್ಲೂ ಐತಿಹಾಸಿಕ ದಾಖಲೆಯ ಎಂಬಂತೆ ೧೫೬ ಸ್ಥಾನಗಳನ್ನು ಗೆದ್ದಿದೆ.
೨೦೧೭ರಲ್ಲೂ ಲೆಕ್ಕಚಾರ ಉಲ್ಟಾ
ಕಳೆದ ಬಾರಿಯ ವಿಧಾನ ಸಭೆ ಚುನಾವಣೆ ವೇಳೆಯೂ ಸೂರತ್‌ನಲ್ಲಿ ಬಿಜೆಪಿ ಮಕಾಡೆ ಮಲಗುತ್ತದೆ ಎಂದು ಹೇಳಲಾಗಿತ್ತು. ಪಾಟೀದಾರ್ ಸಮುದಾಯ ಮೀಸಲಾತಿಗಾಗಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವುದು ಹಾಗೂ ಜಿಎಸ್‌ಟಿ ಹೊರೆ ವಜ್ರದ ವ್ಯಾಪಾರಿಗಳನ್ನು ಕೆರಳಿಸುತ್ತದೆ ಎಂದು ಹೇಳಲಾಗಿತ್ತು. ಹಾಲಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಹಾರ್ದಿಕ್ ಪಟೇಲ್ ಹಾಗೂ ಅಲ್ಪೇಶ್ ಠಾಕೂರ್ ಕೂಡ ಸರಕಾರದ ವಿರುದ್ಧ ತಿರುಗಿ ಬಿದಿದ್ದರು. ಅದರ ಪ್ರಭಾವ ಬಿಜೆಪಿಗೆ ತಟ್ಟಿರಲಿಲ್ಲ. ನಗರದಲ್ಲಿ ಎರಡು ಸ್ಥಾನ ಕಳೆದುಕೊಂಡಿರುವುದು ಬಿಟ್ಟರೆ ಒಟ್ಟಾರೆ ೧೬ ಸ್ಥಾನಗಳಲ್ಲಿ ೧೪ರಲ್ಲೂ ಗೆಲುವು ಸಾಧಿಸಿತ್ತು ಭಾಜಪ.
ಇದನ್ನೂ ಓದಿ | Gujarat Election Result | ನೀವು ನೀಡಿದ ಗೆಲುವು ಕಂಡು ಹೃದಯ ತುಂಬಿ ಬಂದಿದೆ, ಗುಜರಾತ್ ಜನರಿಗೆ ಮೋದಿ ಧನ್ಯವಾದ