Site icon Vistara News

ಕೇಜ್ರಿವಾಲ್​ ಚುನಾವಣೋತ್ಸಾಹ; ಗುಜರಾತ್​​ ಎಲೆಕ್ಷನ್​​ಗೆ 5 ತಿಂಗಳಿರುವಾಗಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !

Gujarat Assembly elections

ನವ ದೆಹಲಿ: ಆಮ್​ ಆದ್ಮಿ ಪಕ್ಷದ ಚುನಾವಣೋತ್ಸಾಹ ಉತ್ತುಂಗದಲ್ಲಿದೆ. ಗುಜರಾತ್​ ವಿಧಾನಸಭೆ ಚುನಾವಣೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ 10 ಅಭ್ಯರ್ಥಿಗಳ ಹೆಸರನ್ನು ಆಪ್​ ಬಿಡುಗಡೆ ಮಾಡಿದೆ (AAP candidates List of Gujarat). 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್​​ನಲ್ಲಿ ಇದೇ ವರ್ಷ ಡಿಸೆಂಬರ್​​ನಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಮೊದಲ ಪಕ್ಷ ಆಪ್​ ಆಗಿದೆ.

ದೆಹಲಿಯಲ್ಲಿ ಮಾತ್ರ ಸರ್ಕಾರ ರಚಿಸಿದ್ದ ಆಮ್​ ಆದ್ಮಿ ಪಕ್ಷಕ್ಕೆ ಈ ಬಾರಿಯ ಪಂಜಾಬ್​​ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. ಪಂಜಾಬ್​​ನಲ್ಲಿ ಸರ್ಕಾರ ರಚನೆ ಮಾಡುತ್ತಿದ್ದಂತೆ, ನಮ್ಮ ಮುಂದಿನ ಗುರಿ ಹಿಮಾಚಲ ಪ್ರದೇಶ ಮತ್ತು ಗುಜರಾತ್​ ಎಂದು ಅರವಿಂದ್ ಕೇಜ್ರಿವಾಲ್​ ಹೇಳಿಕೊಂಡಿದ್ದರು. ಅದರಂತೆ ಗುಜರಾತ್​ನಲ್ಲಿ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ಫೀಲ್ಡ್​ ವರ್ಕ್​ ಪ್ರಾರಂಭ ಮಾಡಿಕೊಂಡಿದ್ದಾರೆ. ಪಂಜಾಬ್​​ನಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿದ ರೀತಿಯಲ್ಲೇ, ಗುಜರಾತ್​​ನಲ್ಲಿ ಈಗಿರುವ ಬಿಜೆಪಿ ಸರ್ಕಾರವನ್ನು ಸೋಲಿಸಿ, ಅಧಿಕಾರ ಚುಕ್ಕಾಣಿ ಹಿಡಿಯುವ ಉತ್ಸಾಹಲ್ಲಿ ಆಮ್​ ಆದ್ಮಿ ಪಕ್ಷವಿದೆ.

ಆಪ್​​ನ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಗುಜರಾತ್​​ನ ವೇರಾವಲ್​, ಗಿರ್​​ ಸೋಮನಾಥ್​​ಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ‘ಆಪ್​ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆದರೆ ನಾವು ಯುವಜನರಿಗೆ ಉದ್ಯೋಗಾವಕಾಶ ನೀಡುತ್ತೇವೆ. ನಿರುದ್ಯೋಗಿಗಳಿಗೆ ತಿಂಗಳ ಭತ್ಯೆ 3 ಸಾವಿರ ರೂ.ಕೊಡುತ್ತೇವೆ’ ಎಂಬ ಭರವಸೆ ನೀಡಿದ್ದಾರೆ. ಇದೀಗ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಆಪ್​ ಪಕ್ಷದ ಪ್ರಮುಖರು, ಗುಜರಾತ್​​ನಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಿಗೆ ಆದ್ಯತೆ ನೀಡಲಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅಭ್ಯರ್ಥಿಗಳು ಯಾರು?-ಕ್ಷೇತ್ರ ಯಾವುದು?
1. ಭೇಮಾಭಾಯಿ ಚೌಧರಿ- ದಿಯೋಘಡ್​ ಕ್ಷೇತ್ರದಿಂದ ಟಿಕೆಟ್​
2. ಜಗ್ಮಲ್ ವಾಲಾ- ಸೋಮನಾಥ್​ ಕ್ಷೇತ್ರ
3. ಅರ್ಜುನ್​ ರಥ್ವಾ-ಛೋಟಾ ಉದಯ್​ಪುರ
4. ಸಾಗರ್​ ರಬಾರಿ- ಬೇಚರಾಜಿ ವಿಧಾನಸಭಾ ಕ್ಷೇತ್ರ
5. ವಶ್ರಮ್ ಸಾಗತಿಯಾ- ರಾಜ್‌ಕೋಟ್ ಗ್ರಾಮಾಂತರ
6. ರಾಮ್​ ಧಡುಕ್​-ಕಮ್ರೇಜ್​
7. ಶಿವಲಾಲ್​ ಬರಸಿಯಾ-ರಾಜಕೋಟ್​ ದಕ್ಷಿಣ
8. ಸುಧೀರ್​ ವಾಘಾನಿ-ಗರಿಯಾಧರ್​
9. ರಾಜೇಂದ್ರ ಸೋಲಂಕಿ-ಬರ್ಡೋಲಿ
10. ಓಂ ಪ್ರಕಾಶ್​ ತಿವಾರಿ-ನರೋಡಾ

ಇದನ್ನೂ ಓದಿ: ಆಪ್‌ಗೆ ಮುಖಭಂಗ; ಭಗವಂತ್‌ ಮಾನ್‌ ಸಂಸದರಾಗಿದ್ದ ಕ್ಷೇತ್ರದಲ್ಲಿ ಎಸ್‌ಎಡಿ-ಎ ಅಭ್ಯರ್ಥಿಗೆ ಗೆಲುವು

Exit mobile version