Site icon Vistara News

Seat Sharing: ದೆಹಲಿಯಲ್ಲಿ ಆಪ್-ಕಾಂಗ್ರೆಸ್‌ ಸೀಟು ಹಂಚಿಕೆ ಫೈನಲ್;‌ ಏನಿದು 4:3 ಸೂತ್ರ?

Mallikarjun Kharge And Arvind Kejriwal

AAP, Congress finalise 4:3 seat-sharing formula for Lok Sabha seats in Delhi

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಶತಾಯ-ಗತಾಯ ಸೋಲಿಸಬೇಕು ಎಂಬ ದೃಷ್ಟಿಯಿಂದ ಇಂಡಿಯಾ ಒಕ್ಕೂಟವನ್ನು (India Bloc) ರಚಿಸಲಾಗಿದ್ದು, ಆಯಾ ರಾಜ್ಯಗಳಲ್ಲಿ ಮೈತ್ರಿಕೂಟದ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಅದರಲ್ಲೂ, ದೆಹಲಿಯಲ್ಲಿ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷದ ನಡುವಿನ ಸೀಟು ಹಂಚಿಕೆ ಮಾತುಕತೆಯು ಮುಕ್ತಾಯಗೊಂಡಿದೆ. ಆಪ್‌ 4 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್‌ 3 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ.

ಸೀಟು ಹಂಚಿಕೆ ಸಂಬಂಧ ಆಪ್‌ ಹಾಗೂ ಕಾಂಗ್ರೆಸ್‌ ಮಧ್ಯೆ ಒಪ್ಪಂದ ನಡೆದಿದೆ. ನಾಲ್ಕು ಕ್ಷೇತ್ರಗಳಲ್ಲಿ ಆಪ್‌, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದದ ಪ್ರಕಾರ, ದೆಹಲಿಯ ಪೂರ್ವ, ಚಾಂದಿನಿ ಚೌಕ್‌ ಹಾಗೂ ಈಶಾನ್ಯ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ. ಇನ್ನು, ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಹಾಗೂ ವಾಯವ್ಯ ಲೋಕಸಭೆ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷವು ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.

INDIA bloc leaders will meet today virtually

2019ರ ಲೋಕಸಭೆ ಚುನಾವಣೆಯಲ್ಲಿ ದೆಹಲಿ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಹಾಗೂ ಆಪ್‌ ಒಂದು ಕ್ಷೇತ್ರದಲ್ಲಿ ಕೂಡ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಇಂಡಿಯಾ ಒಕ್ಕೂಟದ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಆಪ್‌ ಪರಸ್ಪರ ಬೆಂಬಲದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದು, ಕೆಲ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ ಎಂದು ತಿಳಿದುಬಂದಿದೆ. ಇದರ ಮಧ್ಯೆಯೇ, ಬಿಹಾರ, ಪಂಜಾಬ್‌, ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟ ಛಿದ್ರವಾಗಿದ್ದು, ಆಯಾ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿವೆ.

ಇದನ್ನೂ ಓದಿ: Dr. CN Manjunath : ಲೋಕಸಭೆ ಸ್ಪರ್ಧೆಗೆ ನಿರ್ಧಾರ ಮಾಡಿಲ್ಲ, ಆಲೋಚನೆಯಲ್ಲಿದ್ದೇನೆ ಎಂದ ಡಾ. ಮಂಜುನಾಥ್‌

ಉತ್ತರ ಪ್ರದೇಶದಲ್ಲೂ ಸೀಟು ಹಂಚಿಕೆ ಅಂತಿಮ

ಉತ್ತರ ಪ್ರದೇಶದಲ್ಲಿ ಕೂಡ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ನಡುವಿನ ಸೀಟು ಹಂಚಿಕೆ ಒಪ್ಪಂದವು ಅಂತಿಮವಾಗಿದೆ. ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 63 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಹಾಗೂ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲಿದ್ದು, ಜಂಟಿಯಾಗಿ ಚುನಾವಣೆಯನ್ನು ಎದುರಿಸಲಿವೆ. ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಠಿ ಜೊತೆಗೆ ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್‌ಪುರ್, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ , ಬಾರಾಬಂಕಿ ಮತ್ತು ಡಿಯೋರಿಯಾ ಕೇತ್ರಗಳಲ್ಲಿ ಸ್ಪರ್ಧಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version